

ಸಿಡ್ನಿ: ಧಾರ್ಮಿಕ ಕಾರ್ಯಕ್ರಮವೊಂದರ ನಿಮಿತ್ತ ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಜಮಾವಣೆಯಾಗಿದ್ದ ಸುಮಾರು 2000 ಯಹೂದಿಗಳ ಮೇಲೆ ಇಬ್ಬರು ಗುಂಡಿನ ದಾಳಿ ನಡೆಸಿದ್ದು, ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ.
ದಾಳಿ ಬೆನ್ನಲ್ಲೇ ಪೊಲೀಸರು ಪ್ರತಿದಾಳಿ ನಡೆಸಿ ಓರ್ವ ಬಂಧೂಕುಧಾರಿಯನ್ನು ಹತ್ಯೆ ಮಾಡಿದ್ದಾರೆ. ಮತ್ತೊಬ್ಬನನ್ನು ಬಂಧಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡಿರುವ ಆರೋಪಿ ಸಿಡ್ನಿಯಲ್ಲಿ ಡ್ರೈವರ್ ಆಗಿದ್ದ ನವೀದ್ ಅಕ್ರಮ್ (24) ಎಂದು ಗುರ್ತಿಸಲಾಗಿದೆ. ಈತ ಪಾಕಿಸ್ತಾನ ಮೂಲದವನು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮೃತ ವ್ಯಕ್ತಿ ಹಾಗೂ ಗಾಯಗೊಂಡಿರುವ ವ್ಯಕ್ತಿ ತಂದೆ ಹಾಗೂ ಮಗನಾಗಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಅವರು ಮಾತನಾಡಿ, ಒಬ್ಬ ಗುಂಡು ಹಾರಿಸಿದ ವ್ಯಕ್ತಿ ಭದ್ರತಾ ಸಂಸ್ಥೆಗೆ ತಿಳಿದಿರುವ ವ್ಯಕ್ತಿಯೇ ಆಗಿದ್ದು, ಇದು ಯೋಜಿತ ದಾಳಿ ಎಂಬುದಕ್ಕೆ ಯಾವುದೇ ಸುಳಿವುಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ 42 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಘಟನೆಯನ್ನು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಯಹೂದಿಗಳ 'ಹನಕ್ಕಾ' ಧಾರ್ಮಿಕ ಹಬ್ಬ 8 8 ದಿನಗಳ ಕಾಲ ನಡೆಯುತ್ತದೆ. ಭಾನುವಾರ ಹಬ್ಬದ ಮೊದಲ ದಿನವಾಗಿದ್ದು, 1000-2000 ಯಹೂದಿಗಳು ಹಬ್ಬದ ಆಚರಣೆಗಾಗಿ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಸೇರಿದ್ದರು.
ಸಂಜೆ 6:30ರ ಸುಮಾರಿಗೆ (ಆಸ್ಟ್ರೇಲಿಯಾ ಕಾಲಮಾನ) ಇಬ್ಬರು ಬಂದೂಕುಧಾರಿಗಳು ಸ್ಥಳಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. 50 ಬಾರಿ ಗುಂಡು ಹಾರಿಸಿರುವುದು ವರದಿಯಾಗಿದೆ. ಉಗ್ರರು ಮಕ್ಕಳು ಮತ್ತು ವೃದ್ಧರನ್ನೇ ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ವೇಳೆ ಅನೇಕರು ಸ್ಥಳದಲ್ಲೇ ಸಾವಿಗೀಡಾದರೆ, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಬಂದೂಕು ದಾಳಿಗೆ ಬೆಚ್ಚಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
Advertisement