

ಭಾರತವು ಮೇ ತಿಂಗಳಲ್ಲಿ ನಡೆಸಿದ ಆಪರೇಷನ್ ಸಿಂಧೂರ್ ಸಮಯದಲ್ಲಿ ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ನಡೆದಿತ್ತು ಎಂದು ಪಾಕಿಸ್ತಾನ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಪತ್ರಿಕಾಗೋಷ್ಠಿಯಲ್ಲಿ ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಭಾರತೀಯ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಒಪ್ಪಿಕೊಂಡರು. ಈ ದಾಳಿಯು ಮಿಲಿಟರಿ ಮೂಲಸೌಕರ್ಯ ಮತ್ತು ಅಲ್ಲಿದ್ದ ಸಿಬ್ಬಂದಿ ಗಾಯಗೊಂಡಿದ್ದರು ಎಂದರು.
ಭಾರತವು 36 ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ಒಟ್ಟು 80 ಡ್ರೋನ್‌ಗಳನ್ನು ಕಳುಹಿಸಿತ್ತು ಎಂದು ಇಶಾಕ್ ದಾರ್ ಹೇಳಿದ್ದಾರೆ. ಅದರಲ್ಲಿ 79 ಡ್ರೋನ್‌ಗಳನ್ನು ತಡೆಹಿಡಿಯಲಾಯಿತು. ಆದರೆ ಒಂದು ಡ್ರೋನ್ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿತು. ಮೇ 10ರ ಬೆಳಿಗ್ಗೆ ದಾಳಿ ನಡೆದಿತ್ತು ಎಂದು ಅವರು ಹೇಳಿದ್ದಾರೆ. ಈ ಘಟನೆಯ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಾಗರಿಕ ಮತ್ತು ಮಿಲಿಟರಿ ನಾಯಕತ್ವದ ತುರ್ತು ಸಭೆಯನ್ನು ಕರೆಯಲಾಯಿತು ಎಂದರು.
ನೂರ್ ಖಾನ್ ವಾಯುನೆಲೆ ಪಾಕಿಸ್ತಾನ ವಾಯುಪಡೆಯ ಪ್ರಮುಖ ನೆಲೆಯಾಗಿದ್ದು, ಸರ್ಗೋಧಾ, ರಫೀಕಿ, ಜಾಕೋಬಾಬಾದ್ ಮತ್ತು ಮುರಿಡ್ಕೆ ಸೇರಿದಂತೆ ಆಪರೇಷನ್ ಸಿಂಧೂರ್ ಸಮಯದಲ್ಲಿ 11 ವಾಯುನೆಲೆಗಳನ್ನು ಗುರಿಯಾಗಿಸಲಾಗಿತ್ತು ಎಂದು ವರದಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು, ಆರಂಭದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತ್ತು.
ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರು, ಪಾಕಿಸ್ತಾನದ ಸೀಮಿತ ನಷ್ಟಗಳ ಹಕ್ಕುಗಳನ್ನು ತಿರಸ್ಕರಿಸಿದರು. ಪಾಕಿಸ್ತಾನಿ ಮಾಧ್ಯಮ ವರದಿಗಳು ಸ್ವತಃ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಸಿಬ್ಬಂದಿಯನ್ನು ಉಲ್ಲೇಖಿಸುತ್ತವೆ ಎಂದು ಹೇಳಿದರು. ಆಗಸ್ಟ್ 14, 2025ರ ಸಾಮಾ ಟಿವಿ ವರದಿಯು ಆಪರೇಷನ್ ಸಿಂಧೂರ್‌ನಲ್ಲಿ ಮೃತಪಟ್ಟ 138 ಸಿಬ್ಬಂದಿಗೆ ಗೌರವಿಸಲಾಗಿದೆ ಎಂದು ಉಲ್ಲೇಖಿಸಿದೆ ಎಂದು ಅವರು ಗಮನಸೆಳೆದರು.
ಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಹಿಂದೆ ದಾಳಿಯನ್ನು ದೃಢಪಡಿಸಿದ್ದಾರೆ. ಮೇ 9 ಮತ್ತು 10 ರ ರಾತ್ರಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ದಾಳಿಯ ಬಗ್ಗೆ ತಮಗೆ ಮಾಹಿತಿ ನೀಡಿದ್ದರು ಎಂದು ಅವರು ಹೇಳಿದರು. ಜುಲೈನಲ್ಲಿ, ಸಲಹೆಗಾರ ರಾಣಾ ಸನಾವುಲ್ಲಾ ಅವರು ನೂರ್ ಖಾನ್ ವಾಯುನೆಲೆಯ ಕಡೆಗೆ ಹಾರಿಸಿದ ಕ್ಷಿಪಣಿಯು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುತ್ತಿದೆಯೇ ಎಂದು ನಿರ್ಧರಿಸಲು ಪಾಕಿಸ್ತಾನಕ್ಕೆ ಕೇವಲ 30 ರಿಂದ 45 ಸೆಕೆಂಡುಗಳು ಮಾತ್ರ ಇದ್ದವು ಎಂದು ಒಪ್ಪಿಕೊಂಡರು.
Advertisement