
ಟೆಲ್ ಅವೀವ್: ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದದ ಭಾಗವಾಗಿ ಶನಿವಾರ ಬಂಧಿತರಾಗಿದ್ದ ಎಲ್ಲಾ 183 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೇಲಿ ಜೈಲು ಪ್ರಾಧಿಕಾರ ತಿಳಿಸಿದೆ.
ಅಕ್ಟೋಬರ್ 7, 2023 ರ ದಾಳಿಯ ನಂತರ ಬಂಧಿಸಲ್ಪಟ್ಟ ಮತ್ತು ವಿಚಾರಣೆಯಿಲ್ಲದೆ ಬಂಧಿತರಾಗಿದ್ದ 111 ಮಂದಿ ಸೇರಿದಂತೆ ಬಹುತೇಕ ಎಲ್ಲರನ್ನೂ ಗಾಜಾಗೆ ಬಿಡುಗಡೆ ಮಾಡಲಾಗಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಜನರು ಹರ್ಷೋದ್ಗಾರದಿಂದ ಮರಳಿದರು. ಇನ್ನೂ ಜೀವಾವಧಿ ಶಿಕ್ಷೆಗೊಳಗಾಗಿರುವ ಏಳು ಮಂದಿಯನ್ನು ಗಡೀಪಾರು ಮಾಡುವ ಮೊದಲು ಈಜಿಪ್ಟ್‌ಗೆ ಕಳುಹಿಸಲಾಯಿತು.
ಶನಿವಾರ ಬಿಡುಗಡೆಯಾದ ಪ್ರಮುಖರಲ್ಲಿ ಮಾನವೀಯ ನೆರವಿನ ಕಾರ್ಯಕರ್ತ ಮೊಹಮ್ಮದ್ ಎಲ್-ಹಲಾಬಿಯೂ ಸೇರಿದ್ದಾರೆ. ಅವರು 12 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇವರು ಕ್ರಿಶ್ಚಿಯನ್ ನೆರವಿನ ಸಂಸ್ಥೆಯಾದ ವರ್ಲ್ಡ್ ವಿಷನ್‌ನ ಗಾಜಾ ಶಾಖೆಯ ಪ್ಯಾಲೇಸ್ಟಿನಿಯನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. 2016 ರಲ್ಲಿ ಅವರನ್ನು ಬಂಧಿಸಲಾಗಿತ್ತು.
ಹಮಾಸ್‌ಗೆ ಹತ್ತಾರು ಮಿಲಿಯನ್ ಡಾಲರ್‌ಗಳನ್ನು ಕಳುಹಿಸಿದ ಆರೋಪ ಅವರ ಮೇಲಿದೆ. ಆದರೆ, ಈ ಆರೋಪವನ್ನು ಎಲ್-ಹಲಾಬಿ, 47, ಮತ್ತು ವರ್ಲ್ಡ್ ವಿಷನ್ ನಿರಾಕರಿಸಿದ್ದರು. ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಸ್ವತಂತ್ರ ವಿಚಾರಣೆಯಿಂದ ತಿಳಿದುಬಂದಿತ್ತು.
ಇದಕ್ಕೂ ಮುನ್ನಾ ಮೂವರು ಇಸ್ರೇಲಿ ಒತ್ತೆಯಾಳುಗಳನ್ನೂ ಹಮಾಸ್ ಬಿಡುಗಡೆ ಮಾಡಿತು. ಇದು ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಆರು ವಾರಗಳ ಆರಂಭಿಕ ಹಂತದಲ್ಲಿ ನಾಲ್ಕನೇ ಬಾರಿಗೆ ಒತ್ತೆಯಾಳುಗಳ ವಿನಿಮಯವಾಗಿದೆ.
ಮೊದಲ ಹಂತದಲ್ಲಿ 33 ಒತ್ತೆಯಾಳುಗಳು ಮತ್ತು ಸುಮಾರು 2,000 ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿತ್ತು. ಇಸ್ರೇಲ್ ಮತ್ತು ಹಮಾಸ್ ಮುಂದಿನ ವಾರ ಕದನ ವಿರಾಮದ ಎರಡನೇ ಹಂತದ ಮಾತುಕತೆಯನ್ನು ಪ್ರಾರಂಭಿಸಲು ಸಜ್ಜಾಗಿವೆ. ಇದರಲ್ಲಿ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಅನಿರ್ದಿಷ್ಟವಾಗಿ ಕದನ ವಿರಾಮವನ್ನು ವಿಸ್ತರಣೆಯಾಗುವ ಸಾಧ್ಯತೆಯಿದೆ.
ಯುಎನ್ ತಜ್ಞರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ಅನೇಕರು "ಜನಾಂಗೀಯ ಹತ್ಯೆ" ಎಂದು ಕರೆಯುವ ಯುದ್ಧದಲ್ಲಿ 18,000 ಕ್ಕೂ ಹೆಚ್ಚು ಮಕ್ಕಳು, ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು 200 ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 46,913 ಪ್ಯಾಲೆಸ್ಟೀನಿಯನ್ನರ ಹತ್ಯೆಯಾಗಿದೆ.
Advertisement