
ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ಸೇನೆಗೆ ಮರ್ಮಾಘಾತ ನೀಡುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನ ಸೈನಿಕರು ಸೇರಿದಂತೆ ಬರೊಬ್ಬರಿ 41 ಮಂದಿ ಹತರಾಗಿದ್ದಾರೆ.
ಹೌದು.. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದ ಸೈನಿಕರು ಸೇರಿ 41 ಮಂದಿ ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಸಂಖ್ಯೆಯನ್ನು ಅಲ್ಲಗಳೆದಿರುವ ಪಾಕಿಸ್ತಾನ ಸೇನೆ ಸತವರೆಲ್ಲರೂ ಪಾಕಿಸ್ತಾನ ಸೈನಿಕರಲ್ಲ. 18 ಭದ್ರತಾ ಸಿಬ್ಬಂದಿ ಮತ್ತು 23 ಪಾಕ್ ಮೂಲದ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತೇಪೆ ಹಾಕುವ ಕೆಲಸ ಮಾಡಿದೆ.
ಬಲೂಚಿಸ್ತಾನದ ನಿಯಂತ್ರಣ ಕಳೆದುಕೊಳ್ಳುತ್ತಿರುವ ಪಾಕಿಸ್ತಾನ
ಇನ್ನು ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಅಕ್ಷರಶಃ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದ್ದು, ಪ್ರತ್ಯೇಕತಾವಾದಿಗಳ ಕೈ ಮೇಲಾಗುತ್ತಿದೆ. ಇದಕ್ಕೆ ಕಳೆದ 24 ಗಂಟೆಗಳಲ್ಲಿ 41 ಸೈನಿಕರು ಸಾವನ್ನಪ್ಪಿರುವುದೇ ಸಾಕ್ಷಿ ಎನ್ನಲಾಗುತ್ತಿದೆ. ಪಾಕ್ ಸೇನೆಯ ಮಾಹಿತಿ ಅನ್ವಯವೇ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಎರಡೂ ಕಡೆಯ ನಡುವಿನ ಘರ್ಷಣೆಯಲ್ಲಿ ಕನಿಷ್ಠ 18 ಭದ್ರತಾ ಸಿಬ್ಬಂದಿ ಮತ್ತು 23 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ತೊಂದರೆಗೊಳಗಾದ ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.
ಅಂತೆಯೇ ಶನಿವಾರ ಹರ್ನೈ ಜಿಲ್ಲೆಯಲ್ಲಿ ನಡೆದ ಅಂತಹ ಒಂದು ಕಾರ್ಯಾಚರಣೆಯಲ್ಲಿ, ರಾಷ್ಟ್ರೀಯ ಪಡೆಗಳು ಭಯೋತ್ಪಾದಕರನ್ನು ಪರಿಣಾಮಕಾರಿಯಾಗಿ ಎದುರಿಸಿದವು, 11 ಉಗ್ರರನ್ನು ಕೊಂದು ಹಲವಾರು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದವು. ಶುಕ್ರವಾರ ರಾತ್ರಿ, 12 ಭಯೋತ್ಪಾದಕರು ಕೊಲ್ಲಲ್ಪಟ್ಟರು, ಭದ್ರತಾ ಪಡೆಗಳು ಕಲಾತ್‌ನ ಮಂಗೋಚರ್ ಪ್ರದೇಶದಲ್ಲಿ ರಸ್ತೆ ತಡೆಗಳನ್ನು ಸ್ಥಾಪಿಸಲು ಉಗ್ರಗಾಮಿಗಳು ಮಾಡಿದ ಪ್ರಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿದವು ಎಂದು ಹೇಳಿದೆ.
ಸೇನಾ ಮುಖ್ಯಸ್ಥ ದೌಡು!
ಇನ್ನು ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಗೆ ಹಿನ್ನಡೆಯಾಗುತ್ತಿದೆ ಎಂಬ ವಿಚಾರದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಶನಿವಾರ ಬಲೂಚಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಾಂತ್ಯದಲ್ಲಿ ಪ್ರಸ್ತುತ ಇರುವ ಭದ್ರತಾ ಪರಿಸ್ಥಿತಿಯ ಕುರಿತು ಸೇನಾ ಮುಖ್ಯಸ್ಥರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಇದರಲ್ಲಿ ಹಿರಿಯ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಸಹ ಭಾಗವಹಿಸಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ ವರದಿ ಮಾಡಿದೆ.
ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಮತ್ತು ಗವರ್ನರ್ ಶೇಖ್ ಜಾಫರ್ ಖಾನ್ ಮಂಡೋಖೈಲ್ ಅವರೊಂದಿಗೆ ಸೇನಾ ಮುಖ್ಯಸ್ಥರು ಸೈನಿಕರ ಅಂತ್ಯಕ್ರಿಯೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಂತೆಯೇ ಕ್ವೆಟ್ಟಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಯಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿ ಮಾಡಿದರು ಎಂದು ಪಾಕಿಸ್ತಾನ ಮಿಲಿಟರಿಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ತಿಳಿಸಿದೆ.
ಈ ವೇಳೆ ಮಾತನಾಡಿದ ಅವರು, '"ಈ 'ಉನ್ಮಾದಿಗಳು' ಏನೇ ಮಾಡಿದರೂ ಪರವಾಗಿಲ್ಲ, ನಮ್ಮ ಹೆಮ್ಮೆಯ ರಾಷ್ಟ್ರ ಮತ್ತು ಅದರ ಸಶಸ್ತ್ರ ಪಡೆಗಳ ಸ್ಥಿತಿಸ್ಥಾಪಕತ್ವದಿಂದ ನೀವು ಖಂಡಿತವಾಗಿಯೂ ಸೋಲುತ್ತೀರಿ" ಎಂದು ಜನರಲ್ ಮುನೀರ್ ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಬಲೂಚಿಸ್ತಾನದ ಜನರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸೇನೆಯ ಸಂಕಲ್ಪ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಭದ್ರತಾ ಪಡೆಗಳು ಮತ್ತು ಇತರ ಪ್ರಾಂತ್ಯಗಳಿಗೆ ಸೇರಿದ ಜನರ ಮೇಲೆ ನಿಯಮಿತವಾಗಿ ದಾಳಿ ಮಾಡುವ ಬಲೂಚಿಸ್ತಾನದ ಉಗ್ರಗಾಮಿಗಳು ನಡೆಸುತ್ತಿರುವ ಹಿಂಸಾಚಾರಕ್ಕೆ ಬಲೂಚಿಸ್ತಾನ ಸಾಕ್ಷಿಯಾಗುತ್ತಿದೆ. ಬಲೂಚಿಸ್ತಾನ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದೆ. ಆದರೆ, ಇದು ಇತರ ಪ್ರಾಂತ್ಯಗಳಿಗಿಂತ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದ್ದರೂ, ಇದು ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದೆ.
ನಿಷೇಧಿತ ಉಗ್ರಗಾಮಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಗುಂಪು ಸರ್ಕಾರದೊಂದಿಗಿನ ದುರ್ಬಲ ಕದನ ವಿರಾಮ ಒಪ್ಪಂದವನ್ನು ಮುರಿದ ನಂತರ ಭಯೋತ್ಪಾದಕ ದಾಳಿಗಳು ಹೆಚ್ಚಿವೆ. ಇಲ್ಲಿ ಒಟ್ಟು 444 ಭಯೋತ್ಪಾದಕ ದಾಳಿಗಳಲ್ಲಿ ಕನಿಷ್ಠ 685 ಭದ್ರತಾ ಪಡೆಗಳ ಸದಸ್ಯರು ಪ್ರಾಣ ಕಳೆದುಕೊಂಡಿದ್ದು, 2024 ಒಂದು ದಶಕದಲ್ಲಿ ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ಭದ್ರತಾ ಪಡೆಗಳಿಗೆ ಅತ್ಯಂತ ಮಾರಕ ವರ್ಷವಾಗಿದೆ.
Advertisement