
ವಾಷಿಂಗ್ಟನ್: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಸಂದೀರ್ಘ ಸಂಘರ್ಷಕ್ಕೆ ಕಾರಣವಾಗಿರುವ ಗಾಜಾಪಟ್ಟಿಯನ್ನು ಅಮೆರಿಕ ವಶಕ್ಕೆ ಪಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಹೌದು.. ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು, ಅಚ್ಚರಿ ಎಂದರೆ ಟ್ರಂಪ್ ಈ ಘೋಷಣೆ ಮಾಡುವ ವೇದಿಕೆಯಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ಉಪಸ್ಥಿತರಿದ್ದರು.
ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯ ನಂತರ ಟ್ರಂಪ್ ಈ ಬಗ್ಗೆ ಘೋಷಣೆ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿಯಾದ ಟ್ರಂಪ್, ಗಾಜಾ ಪಟ್ಟಿಯನ್ನು ತಮ್ಮ ಸ್ವಾಧೀನಕ್ಕೆ ಪಡೆಯುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಪುನರಾಭಿವೃದ್ಧಿ ಯೋಜನೆಯಡಿ ಅಮೆರಿಕ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿಗೊಳಿಸಿದ ನಂತರ ಅಮೆರಿಕವು ಗಾಜಾವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಈ ಯೋಜನೆಯಡಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿ ಮಾಡಲಾಗುವುದು. ಈ ಯೋಜನೆಯು ಎನ್ಕ್ಲೇವ್ ಅನ್ನು “ಮಧ್ಯಪ್ರಾಚ್ಯದ ರಿವೇರಿಯಾ” ಆಗಿ ಪರಿವರ್ತಿಸಲಿದೆ. ಅಮೆರಿಕ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ನಾವು ಗಾಜಾದೊಂದಿಗೆ ಕೆಲಸ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಅಂತೆಯೇ "ಗಾಜಾದಲ್ಲಿರುವ ನಾಶವಾದ ಕಟ್ಟಡಗಳನ್ನು ತೆರವುಗೊಳಿಸುವ ಮತ್ತು ಸ್ಫೋಟಗೊಳ್ಳದ ಅಪಾಯಕಾರಿ ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಅಮೆರಿಕದ ಆಡಳಿತವು ವಹಿಸಿಕೊಳ್ಳುತ್ತದೆ.
ಅಮೆರಿಕ ನಡೆಗೆ ಹಮಾಸ್ ಖಂಡನೆ
ಇನ್ನು ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳುವ ಅಮೆರಿಕ ನಡೆಯನ್ನು ಗಾಜಾವನ್ನು ಆಳುವ ಪ್ಯಾಲೆಸ್ಟೀನಿಯನ್ ಗುಂಪಾದ ಹಮಾಸ್ ಖಂಡಿಸಿದೆ. ಈ ಪ್ರದೇಶದಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಪ್ರಯತ್ನವಿದು. ಗಾಜಾ ಪಟ್ಟಿಯಲ್ಲಿರುವ ನಮ್ಮ ಜನರು ಈ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಕಿಡಿಕಾರಿದೆ.
Advertisement