
ನ್ಯೂಯಾರ್ಕ್: ಮಗು ಬೇಡದಿದ್ದರೂ ಸಂಭೋಗದ ವೇಳೆ ಸ್ಖಲನ ಮಾಡುವ ಗಂಡಸರಿಗೆ ಸರ್ಕಾರ ಭಾರಿ ಶಾಕ್ ನೀಡಿದ್ದು, ಲಕ್ಷ ಲಕ್ಷ ದಂಡ ಹೇರಲು ಮುಂದಾಗಿದೆ.
ಹೌದು.. ಅಮೆರಿಕದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಓಹಿಯೋ ಮಸೂದೆಯಡಿಯಲ್ಲಿ ಪುರುಷರು ಮಗುವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ತಮ್ಮ ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಸ್ಖಲನ ಮಾಡಿದರೆ ಅವರಿಗೆ 1 ಸಾವಿರ ಡಾಲರ್ನಿಂದ 10,000 ಡಾಲರ್ವರೆಗೆ ದಂಡ ಹೇರಲಾಗುತ್ತದೆ ಎಂದು ಹೇಳಲಾಗಿದೆ.
ಈ ಪ್ರಸ್ತಾವಿತ ಮಸೂದೆಯ ಪ್ರಕಾರ, ಮಗುವಿಗಾಗಿ ಗರ್ಭಧರಿಸುವ ಉದ್ದೇಶವಿಲ್ಲದೆ ಸಂಭೋಗದ ವೇಳೆ ಸ್ಖಲನ ಮಾಡಿದರೆ ಪುರುಷರಿಗೆ ದಂಡ ಹೇರಲಾಗತ್ತದೆಯಂತೆ. ಮೊದಲ ಬಾರಿ ಈ ತಪ್ಪು ಮಾಡುವ ಪುರುಷರಿಗೆ 1,000, ಡಾಲರ್ (87 ಸಾವಿರ ರೂ.) ಎರಡನೇ ಬಾರಿಗೆ 5,000 ಡಾಲರ್ ಮತ್ತು ನಂತರದ ಅಪರಾಧಕ್ಕಾಗಿ 10,000 ಡಾಲರ್ (8.66 ಲಕ್ಷ ರೂ.) ದಂಡ ತೆರಬೇಕಾಗುತ್ತದೆ ಎಂದು ಹೇಳಲಾಗಿದೆ.
ಓಹಿಯೋದ ಇಬ್ಬರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಶಾಸಕರು ಪ್ರಸ್ತಾಪಿಸಿದ ಮಸೂದೆಯು ಮಕ್ಕಳನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ಲೈಂಗಿಕ ಕ್ರಿಯೆಯ ವೇಳೆ ಮಹಿಳೆಯ ಯೋನಿಯೊಳಗೆ ಸ್ಖಲಿಸುವ ‘ಅಪರಾಧ’ಕ್ಕಾಗಿ ಪುರುಷನಿಗೆ 1000 ಅಮೆರಿಕನ್ ಡಾಲರ್ ದಂಡ ವಿಧಿಸಲು ಪ್ರಸ್ತಾಪಿಸಿದೆ. ಕ್ರಮೇಣ ಈ ದಂಡವನ್ನು 5000 ಡಾಲರ್ ಮತ್ತು ಅಂತಿಮವಾಗಿ 10,000 ಡಾಲರ್ಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಡೆಮಾಕ್ರಟಿಕ್ ಪಕ್ಷದ ಶಾಸಕರಾದ ಅನಿತಾ ಸೋಮಾನಿ ಮತ್ತು ಟ್ರಿಸ್ಟಾನ್ ರೇಡರ್ ಅವರು ಈ ಮಸೂದೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಸಂತಾನೋತ್ಪತ್ತಿ ಹಕ್ಕುಗಳ ಜಾಗೃತಿಗಾಗಿ ಮಸೂದೆ
ಸಂತಾನೋತ್ಪತ್ತಿ ಹಕ್ಕುಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಲು ಈ ಮಸೂದೆಯನ್ನು ಪರಿಚಯಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ. ಗರ್ಭಪಾತದಿಂದ ಮಹಿಳೆಯ ಶರೀರ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮಹಿಳೆ ಸ್ವಂತವಾಗಿ ಗರ್ಭಿಣಿಯಾಗುವುದಿಲ್ಲ. ಅದಕ್ಕೆ ಕಾರಣಕರ್ತನಾಗುವ ಪುರುಷನೂ ಆಕೆ ಗರ್ಭ ಧರಿಸದಿರುವ ಬಗ್ಗೆ ಎಚ್ಚರ ವಹಿಸಬೇಕು ಎಂಬ ಕಾರಣಕ್ಕೆ ಈ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಗರ್ಭಪಾತದ ಬಗ್ಗೆ ಗಂಭೀರ ಚರ್ಚೆ
ಇನ್ನು 2022ರಲ್ಲಿ ರೋ ವರ್ಸಸ್ ವೇಡ್ ತೀರ್ಪನ್ನು ರದ್ದುಗೊಳಿಸಿದ ನಂತರ ಗರ್ಭಪಾತವು ಅಮೆರಿಕದಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ಈಗ, ಅತ್ಯಾಚಾರದ ಪರಿಣಾಮವಾಗಿ ಗರ್ಭ ಧರಿಸಿದಾಗಲೂ ಮಹಿಳೆ ಗರ್ಭಪಾತವನ್ನು ಮಾಡಿಸಿಕೊಳ್ಳುವುದು ಅಮೆರಿಕದ ಹಲವು ರಾಜ್ಯಗಳಲ್ಲಿ ಕಾನೂನುಬಾಹಿರವಾಗಿದೆ. ಹೀಗಾಗಿ, ಗರ್ಭಧಾರಣೆ, ಗರ್ಭಪಾತ, ಜನನ ನಿಯಂತ್ರಣ ಇತ್ಯಾದಿಗಳ ಬಗ್ಗೆ ಚರ್ಚೆಗಳು ಬಂದಾಗ ಪುರುಷರು ಸಂತಾನೋತ್ಪತ್ತಿಯ ವಿಷಯದಲ್ಲಿ ಸ್ವಲ್ಪ ಗಮನಹರಿಸಬೇಕು ಎಂದು ಈ ಮಸೂದೆ ಮಂಡಿಸಲಾಗಿದೆ.
Advertisement