
ಲಾಹೋರ್: ಹರಸಾಹಸ ಪಟ್ಟು ತನ್ನ ದೇಶದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಒಂದರ ಮೆಲೊಂದು ತಲೆನೋವು ಆರಂಭವಾಗುತ್ತಿದ್ದು, ಇದೀಗ ಬಾಂಬ್ ಸ್ಫೋಟ ಪ್ರಕರಣ ಹೊಸ ತಲೆನೋವಿಗೆ ಕಾರಣವಾಗಿದೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಉಗ್ರರು ದಾಳಿ ಮಾಡುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಪಂದ್ಯದ ವೇಳೆ ರಚಿನ್ ರವೀಂದ್ರ ಅವರತ್ತ ಉಗ್ರ ಸಂಘಟನೆ ಬೆಂಬಲಿಗನೋರ್ವ ನುಗ್ಗಿದ್ದ ಘಟನೆ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉಗ್ರರು ನೇರವಾಗಿ ಬಾಂಬ್ ಸ್ಫೋಟವನ್ನೇ ನಡೆಸಿದ್ದಾರೆ.
ಹೌದು.. ಪಾಕಿಸ್ತಾನದ ಪೇಶಾವರ ಸಮೀಪದ ಖೈಬರ್ ಪಖ್ತುಂಖ್ವಾದಲ್ಲಿರುವ ಮಸೀದಿಯ ಹೊರಗೆ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರದ ಪ್ರಾರ್ಥನೆ ವೇಳೆ ಸ್ಫೋಟ
ನೌಶೇರಾ ಪಟ್ಟಣದ ಬಳಿಯ ಅಖೋರಾ ಖಟ್ಟಕ್ ಪ್ರದೇಶದ ದಾರುಲ್ ಉಲೂಮ್ ಹಕ್ಕಾನಿಯಾದಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸಂಭವಿಸಿದ ಶಂಕಿತ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿ, 21 ಜನರು ಗಾಯಗೊಂಡಿದ್ದಾರೆ. ಈ ಬಾಂಬ್ ಸ್ಫೋಟ ಪ್ರಕರಣವು ಇದೀಗ ದೇಶವನ್ನೇ ಬೆಚ್ಚಿಬೀಳಿಸಿದ್ದು ಮಾತ್ರವಲ್ಲದೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿರುವ ವಿದೇಶ ತಂಡಗಳಿಗೂ ಭೀತಿ ಕಾಣಲಾರಂಭಿಸಿದೆ. ಅಲ್ಲದೆ ಆಟಗಾರರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು ಪ್ರಾರ್ಥನೆಯ ಸಮಯದಲ್ಲಿ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಉಪಸ್ಥಿತರಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಿದ್ಧರಾಗಿರುವಂತೆ ಆಸ್ಪತ್ರೆ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಏತನ್ಮಧ್ಯೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ವೈದ್ಯಕೀಯ ಸೌಲಭ್ಯ ಕುರಿತು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.
ಮದರಸಾದ ಉಪ ಮೌಲಾನಾ ಆಗಿರುವ ಜಮಿಯತ್ ಉಲೇಮಾ-ಎ-ಇಸ್ಲಾಂ ಸಮಿಯುಲ್ ಹಕ್ (ಜೆಯುಐ-ಎಸ್) ನಾಯಕ ಮೌಲಾನಾ ಹಮೀದ್ ಉಲ್ ಹಕ್ ಸ್ಫೋಟದ ಸಮಯದಲ್ಲಿ ಮಸೀದಿಯಲ್ಲಿದ್ದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ ಮಗ ಸಾನಿ ಹಕ್ಕಾನಿ ಹೇಳಿದ್ದಾರೆ. ಆದಾಗ್ಯೂ, ಅನೇಕ ವರದಿಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement