
ಜನನ ಪ್ರಮಾಣದಲ್ಲಿ ಕುಸಿತ ಕಂಡಿರುವುದರಿಂದ ತೀವ್ರ ಆತಂಕಕ್ಕೆ ತುತ್ತಾಗಿರುವ ಚೀನಾ ಮತ್ತು ಜಪಾನ್ ಸಾಲಿಗೆ ಇದೀಗ ರಷ್ಯಾ ಕೂಡ ಸೇರಿಕೊಂಡಿದೆ. ಜನನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ರಷ್ಯಾ ಕೂಡ ಇದೀಗ ತನ್ನದೇ ಆದ ಹೊಸ ಕ್ರಮವೊಂದನ್ನು ಪರಿಚಯಿಸಿದೆ. ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ ರಷ್ಯಾ 100,000 ರೂಬಲ್ಸ್‌ಗಳನ್ನು (ಅಂದಾಜು 81,000 ರೂ.) ನೀಡುತ್ತಿದೆ ಎಂದು ಮಾಸ್ಕೋ ಟೈಮ್ಸ್ ವರದಿ ಮಾಡಿದೆ.
ಈ ಯೋಜನೆಯ ಅರ್ಹತೆ ಪಡೆಯಲು, ಅರ್ಜಿದಾರರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ಥಳೀಯ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಗಳಾಗಿರಬೇಕು ಮತ್ತು ಕರೇಲಿಯಾ ನಿವಾಸಿಗಳಾಗಿರಬೇಕು ಎಂದಿದೆ.
ಸತ್ತ ಮಗುವಿಗೆ ಜನ್ಮ ನೀಡುವ ತಾಯಂದಿರಿಗೆ ಈ ಬೋನಸ್ ಲಭ್ಯವಿಲ್ಲ ಎಂದು ಕಾನೂನು ಸ್ಪಷ್ಟವಾಗಿ ಹೇಳಿದೆ. ಆದಾಗ್ಯೂ, ಎಸ್ಐಡಿಎಸ್ (Sudden Infant Death Syndrome) ನಿಂದಾಗಿ ಮಗು ಮರಣಹೊಂದಿದರೆ ಈ ಹಣವನ್ನು ಹಿಂಪಡೆಯಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದಲ್ಲದೆ, ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಜನ್ಮ ನೀಡುವ ತಾಯಂದಿರು ಈ ಯೋಜನೆಯ ಲಾಭ ಪಡೆಯುತ್ತಾರೆಯೇ ಅಥವಾ ಮಗುವಿನ ಆರೈಕೆ ಮತ್ತು ಪ್ರಸವಾನಂತರದ ಚೇತರಿಕೆಯ ವೆಚ್ಚಗಳಿಗೆ ಸಹಾಯ ಮಾಡಲು ಹೆಚ್ಚುವರಿ ಬೋನಸ್ ನೀಡಲಾಗುತ್ತದೆಯೇ ಎಂಬ ಬಗ್ಗೆ ಹೇಳಲಾಗಿಲ್ಲ.
ರಷ್ಯಾದ ಜನನ ದರವು ಗಮನಾರ್ಹವಾಗಿ ಕುಸಿತ ಕಂಡಿದ್ದು, ಇದು 25 ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ. 2024ರ ಮೊದಲಾರ್ಧದಲ್ಲಿ, ಕೇವಲ 599,600 ಮಕ್ಕಳು ಜನಿಸಿದ್ದಾರೆ. 2023 ರಲ್ಲಿ ಇದೇ ಅವಧಿಗೆ ಹೋಲಿಸಿದರೆ 16,000 ಜನನಗಳು ಇಳಿಕೆಯಾಗಿವೆ. ರಷ್ಯಾದ ಜನನ ಪ್ರಮಾಣವು ಕುಸಿಯುತ್ತಿರುವುದು 'ದೇಶದ ಭವಿಷ್ಯಕ್ಕೆ ದುರಂತ' ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ವಿವರಿಸಿದ್ದಾರೆ.
ಹೀಗಾಗಿ, ಯುವತಿಯರು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲು ರಷ್ಯಾದ ಇತರ ಭಾಗಗಳಲ್ಲಿ ಸಹ ಇದೇ ರೀತಿಯ ಪ್ರೋತ್ಸಾಹವನ್ನು ಜಾರಿಗೊಳಿಸುತ್ತಿವೆ. ಮಧ್ಯ ರಷ್ಯಾದಲ್ಲಿರುವ ಟಾಮ್ಸ್ಕ್ ನಗರವು ಇದೇ ರೀತಿಯ ಕಾರ್ಯಕ್ರಮವನ್ನು ಘೋಷಿಸಿದೆ. ಒಟ್ಟಾರೆ ರಷ್ಯಾದಲ್ಲಿ ಕನಿಷ್ಠ 11 ಪ್ರಾದೇಶಿಕ ಸರ್ಕಾರಗಳು ಮಗುವಿಗೆ ಜನ್ಮ ನೀಡುವ ವಿದ್ಯಾರ್ಥಿನಿಯರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತಿವೆ ಎಂದು ವರದಿಯಾಗಿದೆ.
ರಷ್ಯಾ ಸರ್ಕಾರವು ತಾಯಿಯಾಗುವವರಿಗೆ ನೀಡುವ ಹಣವನ್ನು ಹೆಚ್ಚಿಸಿದೆ. 2025ರಲ್ಲಿ ಮೊದಲ ಬಾರಿಗೆ ತಾಯಿಯಾಗುವವರಿಗೆ 6,77,000 ರೂಬಲ್ಸ್‌ಗಳನ್ನು ನೀಡಲಾಗುತ್ತದೆ. ಹಿಂದಿನ ವರ್ಷ 6,30,400 ರೂಬಲ್ಸ್‌ಗಳನ್ನು ನೀಡಲಾಗುತ್ತಿತ್ತು. ಹೆಚ್ಚುವರಿಯಾಗಿ, ಎರಡನೇ ಮಗುವನ್ನು ಹೊಂದುವ ತಾಯಂದಿರು 8,94,000 ರೂಬಲ್ಸ್‌ಗಳನ್ನು ಪಡೆಯಲು ಅರ್ಹರಾಗುತ್ತಾರೆ. 2024ರಲ್ಲಿ 8,33,000 ರೂಬಲ್ಸ್‌ಗಳನ್ನು ನೀಡಲಾಗುತ್ತಿತ್ತು.
ಕಡಿಮೆ ಜನನ ಪ್ರಮಾಣ, ಹೆಚ್ಚಿನ ವಯಸ್ಕರ ಮರಣ ಮತ್ತು ವಲಸೆಯಿಂದಾಗಿ ರಷ್ಯಾದ ಜನಸಂಖ್ಯೆಯು ಕ್ಷೀಣಿಸುತ್ತಿದೆ. ಉಕ್ರೇನ್‌ನಲ್ಲಿನ ಯುದ್ಧದಿಂದ ಪರಿಸ್ಥಿತಿಯು ಉಲ್ಬಣಗೊಂಡಿದ್ದು, ಇದು ಹೆಚ್ಚಿನ ಸಾವುನೋವುಗಳಿಗೆ ಮತ್ತು ವಿದೇಶಗಳಿಗೆ ನಾಗರಿಕರ ಸಾಮೂಹಿಕ ನಿರ್ಗಮನಕ್ಕೆ ಕಾರಣವಾಗಿದೆ.
ರಷ್ಯಾದ ಸರ್ಕಾರವು ನಗದು ಪ್ರೋತ್ಸಾಹ ಮತ್ತು ವಸತಿ ಬೆಂಬಲ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಹೀಗಿದ್ದರೂ, ಈ ಪ್ರಯತ್ನಗಳು ಸೀಮಿತ ಯಶಸ್ಸನ್ನು ಹೊಂದಿವೆ ಮತ್ತು ಜನನ ಪ್ರಮಾಣವು ಹೆಚ್ಚಿಲ್ಲ. ಸರ್ಕಾರದ ನೀತಿಗಳು ದೂರದೃಷ್ಟಿಯನ್ನು ಹೊಂದಿಲ್ಲ ಕೂಡಿವೆ ಮತ್ತು ಜನಸಂಖ್ಯಾ ಬಿಕ್ಕಟ್ಟಿಗೆ ಕಾರಣವಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಲಾಗಿದೆ.
Advertisement