
ಒಟ್ಟಾವಾ: ಇತ್ತೀಚೆಗೆ ಭೂಮಿಯ ಆಸುಪಾಸಿನಲ್ಲೇ ಕ್ಷುದ್ರಗ್ರಹವೊಂದು ಹಾದುಹೋದ ಸುದ್ದಿ ಹಸಿರಾಗಿರುವಂತೆಯೇ ಅತ್ತ ಕೆನಡಾದಲ್ಲಿ ಉಲ್ಕಾಶಿಲೆಯೊಂದು ಅಪ್ಪಳಿಸಿರುವ ಘಟನೆ ವರದಿಯಾಗಿದೆ.
ಹೌದು.. ಕೆನಡಾದ ಪ್ರಿನ್ಸ್ ಎಡ್ವರ್ಡ್ ದ್ವೀಪದಲ್ಲಿ ಮನೆಯೊಂದರ ಮುಂದೆಯೇ ಉಲ್ಕಾಶಿಲೆಯೊಂದು ಅಪ್ಪಳಿಸಿದ್ದು, ಈ ಕುರಿತ ವಿಡಿಯೋ ಮನೆಯ ಡೋರ್ ಬೆಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ಷುದ್ರಗ್ರಹದಿಂದ ಬೇರ್ಪಟ್ಟ ಉಲ್ಖಾಶಿಲೆಯೊಂದು ಉರಿಯುತ್ತ ಭೂಮಿಗೆ ಬೀಳುವ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ.
NPR ವರದಿಗಳ ಪ್ರಕಾರ, ಕೆನಡಾದ ಪ್ರಿನ್ಸ್ ಎಡ್ವರ್ಡ್ ದ್ವೀಪದಲ್ಲಿರುವ ಜೋ ವೆಲೈಡಮ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಜೋ ವೆಲೈಡಮ್ ಮತ್ತು ಅವರ ಸಂಗಾತಿ ತಮ್ಮ ಸಾಕು ನಾಯಿಗಳೊಂದಿಗೆ ವಾಕಿಂಗ್ ಗೆ ಹೋಗಿದ್ಜಾಗ ಮನೆಯ ಬಾಗಿಲ ಬಳಿ ಪುಟ್ಟ ಪುಟ್ಟ ಕಲ್ಲುಗಳು ಸುಟ್ಟುಹೋದ ಸ್ಥಿತಿಯಲ್ಲಿ ಬಿದ್ದಿದ್ದವು.
ಆ ಕಲ್ಲುಗಳು ಸಾಮಾನ್ಯ ಕಲ್ಲುಗಳಂತೆ ಇರಲಿಲ್ಲ. ಬಾಗಿಲ ಪಕ್ಕದ ಗೋಡೆಯ ಬಳಿಕ ಕಲ್ಲು ಬಿದ್ದ ಗುರುತು ಇತ್ತು. ಅನುಮಾನಗೊಂಡು ಡೋರ್ ಬೆಲ್ ಕ್ಯಾಮೆರಾ ಪರೀಶಿಲೀಸಿದಾಗ ಆಗಸದಿಂದ ಏನೋ ಬಿದ್ದು ಸ್ಫೋಟವಾದ ರೀತಿಯಲ್ಲಿ ಭಾಸವಾಯಿತು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅದು ಉಲ್ಕಾಶಿಲೆಯೆಂದು ಮಾಹಿತಿ ತಿಳಿಯಿತು ಎಂದು ಹೇಳಿದ್ದಾರೆ.
ಈ ವಿಚಾರ ತಿಳಿಯುತ್ತಲೇ ಪ್ರಿನ್ಸ್ ಎಡ್ವರ್ಡ್ ದ್ವೀಪಕ್ಕೆ ಆಗಮಿಸಿದ ತಜ್ಞರು ಉಲ್ಕಾಶಿಲೆಯ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ಅದನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಉಲ್ಕಾಶಿಲೆ ಬೀಳುವಿಕೆಯ ಶಬ್ದವನ್ನು ಯಾರಾದರೂ ದಾಖಲಿಸಿರುವುದು ಇದೇ ಮೊದಲು. ಇದು ದ್ವೀಪದ ನೈಸರ್ಗಿಕ ಇತಿಹಾಸಕ್ಕೆ ಸಂಪೂರ್ಣ ಹೊಸ ಆಯಾಮವನ್ನು ಸೇರಿಸುತ್ತದೆ ಎಂದು ಆಲ್ಬರ್ಟಾ ವಿಶ್ವವಿದ್ಯಾಲಯದ ಭೂವಿಜ್ಞಾನಿ ಕ್ರಿಸ್ ಹರ್ಡ್ ಹೇಳಿದ್ದಾರೆ.
Advertisement