
ನವದೆಹಲಿ: ಭಾರತ ಮತ್ತು ಅಮೆರಿಕ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಸಮಾನವಾಗಿಸಲು ಹೆಚ್ಚಿನ ಭದ್ರತಾ ಸಾಧನಗಳನ್ನು ಖರೀದಿಸುವ ಬಗ್ಗೆ ಪರಿಗಣಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಹೇಳಿದ್ದಾರೆ.
ನರೇಂದ್ರ ಮೋದಿಯವರು ಫೆಬ್ರವರಿ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಬಹುದು ಎಂದು ಕೂಡ ಡೊನಾಲ್ಡ್ ಟ್ರಂಪ್ ಈ ಸಂದರ್ಭದಲ್ಲಿ ವರದಿಗಾರರಿಗೆ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪರಸ್ಪರ ಭೇಟಿ ಸಭೆಯ ದಿನಾಂಕಗಳನ್ನು ಅಂತಿಮಗೊಳಿಸುವ ಬಗ್ಗೆ ಎರಡೂ ದೇಶಗಳು ಪರಿಶೀಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ದೂರವಾಣಿ ಸಂಭಾಷಣೆ ವೇಳೆ ಟ್ರಂಪ್ ಮತ್ತು ಮೋದಿ ವಲಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅಕ್ರಮವಾಗಿ ಅಮೆರಿಕಕ್ಕೆ ಬಂದ ಭಾರತೀಯರ ವಾಪಸಾತಿಗೆ ಸಂಬಂಧಿಸಿದಂತೆ ಮೋದಿಯವರು ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಆಶಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಈ ಮಧ್ಯೆ, ಅಮೆರಿಕಕ್ಕೆ ಹಾನಿ ಮಾಡುವ ದೇಶಗಳ ಮೇಲೆ ಸುಂಕಗಳನ್ನು ವಿಧಿಸುವ ಬಗ್ಗೆ ಟ್ರಂಪ್ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಸೋಮವಾರ ಫ್ಲೋರಿಡಾ ಸಭೆಯಲ್ಲಿ ಹೌಸ್ ಆಫ್ ರಿಪಬ್ಲಿಕನ್ನರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಸುಂಕಗಳನ್ನು ಹೊಂದಿದ್ದಕ್ಕಾಗಿ ಚೀನಾ ಮತ್ತು ಬ್ರೆಜಿಲ್ ಜೊತೆ ತುರ್ತು ಸಭೆ ಕರೆದಿದ್ದಾರೆ. ಭಾರತವನ್ನು ಸಹ ಈ ವರ್ಗಕ್ಕೆ ಸೇರಿಸಿದ್ದು, ಇದು ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಮಾತುಕತೆಗಳ ಸಂಕೀರ್ಣ ಸ್ವರೂಪವನ್ನು ಸೂಚಿಸುತ್ತದೆ.
ಮೋದಿ-ಟ್ರಂಪ್ ಟೆಲಿಕಾನ್ ಕುರಿತ ಹೇಳಿಕೆಯಲ್ಲಿ, ಶ್ವೇತಭವನವು ಇದು ಫಲಪ್ರದ ಮಾತುಕತೆ ಎಂದು ಹೇಳಿದೆ. ಉಭಯ ನಾಯಕರು ದ್ವಿಪಕ್ಷೀಯ ಸಹಕಾರವನ್ನು ಗಾಢಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಇಂಡೋ-ಪೆಸಿಫಿಕ್, ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನಲ್ಲಿ ಭದ್ರತೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಿದೆ.
ಭಾರತವು ಅಮೆರಿಕ ನಿರ್ಮಿತ ಭದ್ರತಾ ಸಲಕರಣೆಗಳ ಖರೀದಿಯನ್ನು ಹೆಚ್ಚಿಸುವ ಮತ್ತು ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧದತ್ತ ಸಾಗುವ ಮಹತ್ವವನ್ನು ಅಧ್ಯಕ್ಷರು ಒತ್ತಿ ಹೇಳಿದರು ಎಂದು ಅದು ಹೇಳಿದೆ. ಅಮೆರಿಕ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಎರಡೂ ರಾಷ್ಟ್ರಗಳ ನಡುವಿನ ದ್ವಿಮುಖ ವ್ಯಾಪಾರವು 2023-24ರಲ್ಲಿ 118 ಬಿಲಿಯನ್ ಡಾಲರ್ ಮೀರಿದೆ, ಭಾರತವು 32 ಬಿಲಿಯನ್ ಡಾಲರ್ ಹೆಚ್ಚುವರಿಯನ್ನು ಕಂಡಿದೆ.
ಟ್ರಂಪ್ ಮತ್ತು ಮೋದಿ ಯುಎಸ್-ಭಾರತ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಕ್ವಾಡ್ ಪಾಲುದಾರಿಕೆಯನ್ನು ಮುನ್ನಡೆಸಲು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ, ಭಾರತವು ಈ ವರ್ಷದ ಕೊನೆಯಲ್ಲಿ ಮೊದಲ ಬಾರಿಗೆ ಕ್ವಾಡ್ ಲೀಡರ್ ಸಭೆಯನ್ನು ಆಯೋಜಿಸುತ್ತದೆ ಎಂದು ಶ್ವೇತಭವನ ಹೇಳಿದೆ.
ಪ್ರಧಾನಿ ಅಮೆರಿಕಕ್ಕೆ ಭೇಟಿ
ಪ್ರಧಾನಿ ಮೋದಿಯವರು ಫೆಬ್ರವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪರಸ್ಪರ ಅನುಕೂಲಕರ ದಿನಾಂಕವನ್ನು ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.
Advertisement