
ಇಸ್ಲಾಮಾಬಾದ್: ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಮೇಲೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅವರು ಹೊರಡಿಸಿರುವ ಕಾರ್ಯನಿರ್ವಾಹಕ ಆದೇಶದ ನಂತರ ಅಮೆರಿಕ ಪಾಕಿಸ್ತಾನಕ್ಕೆ ನೀಡುವ ವಿದೇಶಿ ನೆರವನ್ನು ಮರು ಮೌಲ್ಯಮಾಪನದ ಉದ್ದೇಶದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಅಮೆರಿಕದ ಈ ನಿರ್ಧಾರದಿಂದ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಪ್ರೋತ್ಸಾಹಿಸುವ ' ಸಾಂಸ್ಕೃತಿಕ ಸಂರಕ್ಷಣೆಗಾಗಿ ರಾಯಭಾರಿಗಳ ನಿಧಿ' ಯೋಜನೆ ಸೇರಿದಂತೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯ (USAID)ಹಲವು ಯೋಜನೆಗಳು ಸ್ಥಗಿತಗೊಂಡಿವೆ.
ಟ್ರಂಪ್ ನಿರ್ಧಾರದಿಂದ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ನಾಲ್ಕು ಯೋಜನೆಗಳು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಯೋಜನೆಗಳು ಕೂಡ ಸ್ಥಗಿತಗೊಂಡಿವೆ ಎಂದು ವರದಿ ತಿಳಿಸಿದೆ.ಅವುಗಳಲ್ಲಿ ಸಾಮಾಜಿಕ ರಕ್ಷಣೆ ಚಟುವಟಿಕೆಗೆ ಸಂಬಂಧಿಸಿದ ಕಾರ್ಯಕ್ರಮ 2025ರ ಅಂತ್ಯದಲ್ಲಿ ರದ್ದಾಗಬಹುದು.
ಅಮೆರಿಕದ ಕ್ರಮವು ಆರೋಗ್ಯ, ಕೃಷಿ, ಜೀವನೋಪಾಯ ಮತ್ತು ಆಹಾರ ಭದ್ರತೆ, ಪ್ರವಾಹ, ಹವಾಮಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳಿಗೂ ಹೊಡೆತ ನೀಡಿದೆ. ಟ್ರಂಪ್ ಅವರ ಆದೇಶದಿಂದ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಆಡಳಿತ ನಿಧಿಗಳಿಗೂ ಹೊಡೆತ ಬಿದ್ದಿದೆ. ಈ ಕೆಲವು ಕಾರ್ಯಕ್ರಮಗಳು ಶಾಶ್ವತವಾಗಿ ಸ್ಥಗಿತಗೊಳ್ಳುತ್ತವೆ ಅಥವಾ ಕನಿಷ್ಠ ಗಮನಾರ್ಹವಾಗಿ ಕಡಿಮೆಯಾಗುತ್ತವೆ ಎಂಬ ಭಯವನ್ನು ವ್ಯಕ್ತಪಡಿಸಲಾಗುತ್ತಿದೆ.
ಆದಾಗ್ಯೂ, ಈ ಯೋಜನೆಗಳ ಒಟ್ಟು ಮೌಲ್ಯವು ತಿಳಿದಿಲ್ಲ, ಏಕೆಂದರೆ ಅಮೆರಿಕ ಪ್ರಸ್ತುತ ಪಾಕಿಸ್ತಾನಕ್ಕೆ ಎಷ್ಟು ವಾರ್ಷಿಕ ನೆರವು ನೀಡುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಪಾಕಿಸ್ತಾನಕ್ಕೆ ನೆರವು ಸ್ಥಗಿತದ ಟ್ರಂಪ್‌ರ ಕಾರ್ಯನಿರ್ವಾಹಕ ಕ್ರಮಗಳ ಬೆಳವಣಿಗೆ ಮತ್ತು ಪರಿಣಾಮವನ್ನು ಪಾಕಿಸ್ತಾನದ ಅಧಿಕಾರಿಗಳು ಇಲ್ಲಿಯವರೆಗೆ ದೃಢಪಡಿಸಿಲ್ಲ.
Advertisement