
ಲಾಹೋರ್: ಭಯೋತ್ಪಾದನೆ ವಿಚಾರವಾಗಿ ಸದಾಕಾಲಾ ಭಾರತದೊಂದಿಗೆ ಸಂಘರ್ಷಕ್ಕಿಳಿಯುವ ಪಾಕಿಸ್ತಾನಕ್ಕೆ ಅದೇ ಭಯೋತ್ಪಾದನೆ ಜಾಗತಿಕ ಮುಜುಗರ ತಂದೊಡ್ಡಿದೆ.
ಹೌದು.. ಮಂಗಳವಾರ ಬಿಡುಗಡೆಯಾದ ಹೊಸ ವರದಿಯ ಪ್ರಕಾರ, ಈ ವರ್ಷದ ಜೂನ್ ಒಂದೇ ತಿಂಗಳಿನಲ್ಲಿ ಪಾಕಿಸ್ತಾನದಾದ್ಯಂತ ಬರೊಬ್ಬರಿ 78 ಭಯೋತ್ಪಾದಕ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ 53 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 94 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇಸ್ಲಾಮಾಬಾದ್ ಮೂಲದ ಚಿಂತಕರ ಚಾವಡಿ 'ಪಾಕಿಸ್ತಾನ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ (PICSS)' ಬಿಡುಗಡೆ ಮಾಡಿದ ಮಾಸಿಕ ಭದ್ರತಾ ವರದಿಯ ಪ್ರಕಾರ, 2025 ರ ಜನವರಿಯಿಂದ ಜೂನ್ ವರೆಗೆ ದೇಶಾದ್ಯಂತ 502 ಭಯೋತ್ಪಾದಕ ದಾಳಿಗಳು ಸಂಭವಿಸಿದ್ದು, ಒಟ್ಟು 737 ಸಾವುಗಳು ಸಂಭವಿಸಿವೆ ಎಂದು ಮಾಹಿತಿ ಹೊರ ಹಾಕಿದೆ.
ಈ ಪೈಕಿ ಅಂದರೆ ಮೃತರಲ್ಲಿ 284 ಭದ್ರತಾ ಪಡೆ ಸಿಬ್ಬಂದಿ ಮತ್ತು 273 ನಾಗರಿಕರು ಸೇರಿದ್ದಾರೆ. ಜೂನ್ ತಿಂಗಳಲ್ಲಿ ಮಾತ್ರವೇ ಗರಿಷ್ಠ ಅಂದರೆ 78 ಭಯೋತ್ಪಾದಕ ದಾಳಿಗಳು ನಡೆದಿದ್ದು, ಈ ಪೈಕಿ 53 ಭದ್ರತಾ ಸಿಬ್ಬಂದಿ, 39 ನಾಗರಿಕರು ಮತ್ತು ಶಾಂತಿ ಸಮಿತಿಗಳ 2 ಸದಸ್ಯರು ಸಾವನ್ನಪ್ಪಿದ್ದಾರೆ. ಇದಲ್ಲದೆ ಹೆಚ್ಚುವರಿಯಾಗಿ, 126 ಭದ್ರತಾ ಸಿಬ್ಬಂದಿ ಮತ್ತು 26 ನಾಗರಿಕರು ಸೇರಿದಂತೆ 189 ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನಿ ಭದ್ರತಾ ಪಡೆಗಳು ಜೂನ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದವು. ಪರಿಣಾಮ ಈ ಕಾರ್ಯಾಚರಣೆಯಲ್ಲಿ 71 ಉಗ್ರರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯಲ್ಲಿ 2 ಭದ್ರತಾ ಸಿಬ್ಬಂದಿ ಮತ್ತು 2 ನಾಗರಿಕರು ಸಾವನ್ನಪ್ಪಿದ್ದರು.
52 ಉಗ್ರರ ಬಂಧನ
ಅಂತೆಯೇ ಇದೇ ಕಾರ್ಯಾಚರಣೆಗಳಲ್ಲಿ, 10 ಉಗ್ರರು ಮತ್ತು 5 ನಾಗರಿಕರು ಗಾಯಗೊಂಡಿದ್ದು, ಜೂನ್‌ನಲ್ಲಿ 52 ಶಂಕಿತ ಉಗ್ರರನ್ನು ಬಂಧಿಸಲಾಯಿತು, ಮುಖ್ಯವಾಗಿ ಖೈಬರ್ ಪಖ್ತುನ್ಖ್ವಾದ ಮಧ್ಯ ಪ್ರದೇಶಗಳಿಂದ ಹೆಚ್ಚು ಉಗ್ರರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಜೂನ್‌ನಲ್ಲಿ ಉಗ್ರಗಾಮಿ ದಾಳಿಗಳು ಮತ್ತು ಭದ್ರತಾ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಒಟ್ಟು 175 ಸಾವುನೋವುಗಳು ಸಂಭವಿಸಿವೆ. ಈ ಪೈಕಿ 55 ಭದ್ರತಾ ಸಿಬ್ಬಂದಿ, 77 ಉಗ್ರರು, 41 ನಾಗರಿಕರು ಮತ್ತು 2 ಶಾಂತಿ ಸಮಿತಿ ಸದಸ್ಯರು ಸೇರಿದ್ದಾರೆ ಎಂದು ಅದು ಹೇಳಿದೆ.
Advertisement