'ಕಾನೂನಿಗಿಂತ ಯಾರೂ ದೊಡ್ಡವರಲ್ಲ': ಒಬಾಮಾ ಬಂಧಿಸುವ AI ವೀಡಿಯೋ ಹಂಚಿಕೊಂಡ ಟ್ರಂಪ್, ಆಕ್ರೋಶ
ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಕ್ ಒಬಾಮಾ ಅವರನ್ನು ಬಂಧಿಸುವ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ವೀಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಬರೆದುಕೊಂಡಿದ್ದಾರೆ.
ಟ್ರಂಪ್ ಅವರು ಹಂಚಿಕೊಂಡಿರುವ ಎಐ ಆಧಾರಿತ ವಿಡಿಯೋದಲ್ಲಿ ಇಬ್ಬರು ಏಜೆಂಟರು ಒಬಾಮಾ ಅವರ ಕೈಗೆ ಕೋಳ ತೊಡಿಸಿ ಎಳೆದುಕೊಂಡು ಹೋಗುತ್ತಿರುವುದು, ಪಕ್ಕದಲ್ಲೇ ಟ್ರಂಪ್ ನಗುತ್ತಾ ಕುಳಿತಿರುವುದು ಕಂಡು ಬಂದಿದೆ. ವೀಡಿಯೋದ ಕೊನೆಯಲ್ಲಿ ಒಬಾಮಾ ಜೈಲಿನಲ್ಲಿ ಕೈದಿಯ ಸಮವಸ್ತ್ರದಲ್ಲಿ ಕುಳಿತಿರುವುದೂ ಕೂಡ ಕಂಡು ಬಂದಿದೆ.
ಆದರೆ, ವಿಡಿಯೋ ನಕಲಿ ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿಲ್ಲ.ಯಾವುದೇ ಸ್ಪಷ್ಟೀಕರಣವಿಲ್ಲದೆ ಟ್ರಂಪ್ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ 2016 ರ ಅಮೆರಿಕದ ಅಧ್ಯಕ್ಷೀಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದೆ ಎಂಬ ಆರೋಪಗಳ ಮೇಲೆ ಒಬಾಮಾ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದರು. ಅದಾದ, ಕೆಲವು ದಿನಗಳ ನಂತರ ಟ್ರಂಪ್ ಅವರು ಒಬಾಮಾ ಬಂಧಿಸುತ್ತಿರುವ ಎಐ ಆಧಾರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

