
ಪೇಶಾವರ: ಭಾರತದ ವಿರುದ್ಧ ಯಾವಾಗಲೂ ಕತ್ತಿ ಮಸಿಯುವ ಶತ್ರುರಾಷ್ಟ್ರ ಪಾಕಿಸ್ತಾನದ ಮೇಲೆ ವರುಣ ವಕ್ರದೃಷ್ಟಿ ಬೀರಿದ್ದು, ಕಳೆದ 24 ಗಂಟೆಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮಳೆ ಸಂಬಂಧಿತ ಅನಾಹುತಗಳಲ್ಲಿ ಮೃತಪಟ್ಟವರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮಂಗಳವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಇಬ್ಬರು ಪುರುಷರು ಸೇರಿದಂತೆ ಇಬ್ಬರು ಮಹಿಳೆಯರು, ಎಂಟು ಮಕ್ಕಳು ಸಾವನ್ನಪ್ಪಿದ್ದರೆ, ಇತರ 10 ಮಂದಿ ಮಳೆ ಸಂಬಂಧಿತ ಘಟನೆಗಳಲ್ಲಿ ಗಾಯಗೊಂಡಿದ್ದಾರೆ. ಈ ಮುಂಗಾರು ಅವಧಿಯಲ್ಲಿ ಭಾರಿ ಮಳೆಯಿಂದಾಗಿ ಇಲ್ಲಿಯವರೆಗೂ 594 ಜನರು ಗಾಯಗೊಂಡಿದ್ದಾರೆ ಎಂದು NDMA ಹೇಳಿದೆ.
ಪಂಜಾಬ್ ನಲ್ಲಿ ಅತಿ ಹೆಚ್ಚು 135 ಜನರು ಸಾವನ್ನಪ್ಪಿದ್ದು, 470 ಜನರು ಗಾಯಗೊಂಡಿದ್ದಾರೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ 56 ಜನರು ಸಾವನ್ನಪ್ಪಿದ್ದು, 72 ಜನರು ಗಾಯಗೊಂಡಿದ್ದಾರೆ. ಸಿಂಧ್ ಪ್ರಾಂತ್ಯದಲ್ಲಿ 24 ಜನರು ಮೃತಪಟ್ಟಿದ್ದರೆ 40 ಮಂದಿ ಗಾಯಗೊಂಡಿದ್ದಾರೆ.
ಬಲೋಚಿಸ್ತಾನದಲ್ಲಿ 16 ಮಂದಿ ಸಾವನ್ನಪ್ಪಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.ಬಹುತೇಕ ಮಂದಿ ಮನೆ ಕಟ್ಟಡ, ಪ್ರವಾಹ, ಭೂಕುಸಿತ, ಸಿಡಿಲು ಮತ್ತು ವಿದ್ಯುತ್ ಆಘಾತದಿಂದ ಸಾವನ್ನಪ್ಪಿರುವುದಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮುಂಗಾರು ಆರಂಭವಾದಾಗಿನಿಂದಲೂ 804 ಮನೆಗಳು ನೆಲಸಮಗೊಂಡಿದ್ದು, 200 ಜಾನುವಾರಗಳು ಮೃತಪಟ್ಟಿದ್ದು, ಪ್ರವಾಹ ಪೀಡಿತ ಅಥವಾ ತಗ್ಗು ಪ್ರದೇಶದಲ್ಲಿನ ಜನರು ಮುನ್ನೆಚ್ಚರಿಕೆ ವಹಿಸುವಂತೆ NDMA ಸಲಹೆ ನೀಡಿದೆ.
Advertisement