
ಲಂಡನ್: ಈ ಹಿಂದೆ ಲಂಡನ್ ನ ಇಸ್ಕಾನ್ ದೇಗುಲದ ಗೋವಿಂದಾ ರೆಸ್ಟೋರೆಂಟ್ ಒಳಗೆ ಯುವಕನೋರ್ವ ಚಿಕನ್ ತಿಂದು ಭಕ್ತರ ನಂಬಿಕೆಗಳಿಗೆ ಘಾಸಿ ಮಾಡುವ ಪ್ರಯತ್ನ ಮಾಡಿದ್ದ.. ಆದರೆ ಇದೀಗ ಇದಕ್ಕೆ ಇಸ್ಕಾನ್ ಭಕ್ತರು ನೀಡಿರುವ ಪ್ರತಿಕ್ರಿಯೆಗೆ ನೆಟ್ಟಿಗರೇ ಫಿದಾ ಆಗಿದ್ದಾರೆ.
ಹೌದು.. ಆಫ್ರಿಕನ್ ಮೂಲದ ವ್ಯಕ್ತಿಯೊಬ್ಬ ಲಂಡನ್ನಲ್ಲಿರುವ ಇಸ್ಕಾನ್ (ISKCON) ನಡೆಸುತ್ತಿರುವ ಸಸ್ಯಾಹಾರಿ ರೆಸ್ಟೋರೆಂಟ್ ಒಳಗೆ KFC ಚಿಕನ್ ಬಾಕ್ಸ್ ತಂದು, ತಿಂದಿರುವ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಸ್ಯಾಂಜೋ ಎಂಬ ಯುವಕ ರೆಸ್ಟೋರೆಂಟ್ ಒಳಗೆ ಬಂದು ಚಿಕನ್ ತಿಂದಿದ್ದ. ಈ ವೇಳೆ ರೆಸ್ಟೋರೆಂಟ್ ನಲ್ಲಿದ್ದ ಹೋಟೆಲ್ ಸಿಬ್ಬಂದಿ ಆಚೆ ಹೋಗಿ ಎಂದು ಹೇಳಿದರೂ ಕೇಳದೆ ಅವರಿಗೆ ಚಿಕನ್ ಪೀಸನ್ನು ತೋರಿಸುತ್ತಾ ಆತ ಅತಿರೇಕವಾಗಿ ವರ್ತಿಸಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಹಿಂದೂಗಳ ಭಾವನೆಗೆ ಧಕ್ಕೆತರುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಇಸ್ಕಾನ್ ತಿರುಗೇಟು
ಇನ್ನು ಈ ಕೃತ್ಯವನ್ನು ಇಸ್ಕಾನ್ ಮಂಡಳಿ ಕೂಡ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಇದೀಗ ಇಸ್ಕಾನ್ ಕೂಡ ತನ್ನದೇ ಆದ ಧಾಟಿಯಲ್ಲಿ ಇದಕ್ಕೆ ತಿರುಗೇಟು ನೀಡಿದ್ದು, ಇಸ್ಕಾನ್ ಭಕ್ತರು ಲಂಡನ್ ನ ಕೆಎಫ್ ಸಿ ರೆಸ್ಟೋರೆಂಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಆದರೆ ಅವರು ಕೋಪ ಅಥವಾ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸುತ್ತಿಲ್ಲ. ಬದಲಾಗಿ ಶಾಂತವಾದ ಆಧ್ಯಾತ್ಮಿಕ ಪ್ರತಿಕ್ರಿಯೆಯಲ್ಲಿ 'ಹರೇ ಕೃಷ್ಣ' ಎಂದು ಜಪಿಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಆ ಮೂಲಕ ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯ ಕುರಿತು ಸಾಮಾನ್ಯರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಅತ್ತ ಕೆಎಫ್ ಸಿ ಸಿಬ್ಬಂದಿಗಳ ಕೂಡ ಇಸ್ಕಾನ್ ಪ್ರತಿನಿಧಿಗಳ ಜೊತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ನೆಟ್ಟಿಗರು ಫಿದಾ
ಇಸ್ಕಾನ್ ಸಿಬ್ಬಂದಿಗಳ ಈ ವಿಶೇಷ ರೀತಿಯ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಆರ್ಭಟವಿಲ್ಲದೇ, ಆಕ್ರೋಶವಿಲ್ಲದೇ ಧಾರ್ಮಿಕತೆಯ ಕುರಿತು ಅರಿವು ಮೂಡಿಸುವ ಪ್ರತಿಭಟನೆ ನಡೆಸಿದ್ದಾರೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Advertisement