
ಇಸ್ಲಾಮಾಬಾದ್: ಧೀರ್ಘಕಾಲದಿಂದ ಬಾಕಿ ಇರುವ ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಳ್ಳಲು ಭಾರತದೊಂದಿಗೆ 'ಅರ್ಥಪೂರ್ಣ ಮಾತುಕತೆ' ಯಲ್ಲಿ ತೊಡಗಿಸಿಕೊಳ್ಳುವ ಪಾಕಿಸ್ತಾನದ ಇಚ್ಛೆಯನ್ನು ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಪುನರುಚ್ಚರಿಸಿದ್ದಾರೆ.
ಬ್ರಿಟಿಷ್ ಹೈ ಕಮಿಷನರ್ ಜೇನ್ ಮ್ಯಾರಿಯೊಟ್ ಅವರನ್ನು ಪ್ರಧಾನ ಮಂತ್ರಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಶೆಹಬಾಜ್ ಷರೀಫ್ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಉಭಯ ನಾಯಕರು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯದಲ್ಲಿನ ಪ್ರಾದೇಶಿಕ ಬೆಳವಣಿಗೆಗಳು ಮತ್ತು ಪಾಕಿಸ್ತಾನ-ಯುನೈಟೆಡ್ ಕಿಂಗ್‌ಡಮ್ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದ್ದಾರೆ. ಇತ್ತೀಚಿನ ಪಾಕಿಸ್ತಾನ-ಭಾರತ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ವಿಗ್ನತೆ ಕಡಿಮೆ ಮಾಡುವಲ್ಲಿ ಯುಕೆಯ ನೆರವಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಕಿ ಇರುವ ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಳ್ಳಲು ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆಗೆ ಪಾಕಿಸ್ತಾನ ಸಿದ್ಧವಿರುವುದಾಗಿ ಪುನರುಚ್ಚರಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಭಾರತ ಮೇ 7 ರಂದು 'ಆಪರೇಷನ್ ಸಿಂಧೂರ್' ಆರಂಭಿಸಿದ ನಂತರ ಉದ್ವಿಗ್ನತೆ ಉಂಟಾಗಿತ್ತು. ನಾಲ್ಕು ದಿನಗಳ ಮಿಲಿಟರಿ ಕಾರ್ಯಾಚರಣೆ ಬಳಿಕ ಮೇ 10 ರಂದು ಕದನ ವಿರಾಮ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಮ್ಮತಿ ನೀಡಿದ್ದವು.
ಆದಾಗ್ಯೂ, ಪಾಕಿಸ್ತಾನ ಜೊತೆಗಿನ ಯಾವುದೇ ಮಾತುಕತೆಯು ಭಯೋತ್ಪಾದನೆಯ ವಿಷಯಗಳು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ವಾಪಸಾತಿಗೆ ಸೀಮಿತವಾಗಿರಬೇಕು ಎಂದು ಭಾರತ ಹೇಳುತ್ತಿದೆ.
ಪಾಕಿಸ್ತಾನ-ಯುಕೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಲವರ್ಧನೆಯಾಗಿರುವುದಾಗಿ ಹೇಳಿದ ಪ್ರಧಾನಿ ಷರೀಫ್, ಉಭಯ ದೇಶಗಳ ಇತ್ತೀಚಿನ ವ್ಯಾಪಾರ ಮಾತುಕತೆಗಳನ್ನು ಸ್ವಾಗತಿಸಿದ್ದಾರೆ. ಇದರಿಂದ ಪರಸ್ಪರ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನಗಳನ್ನು ಪುನರಾಂಭಿಸುವ ಯುಕೆ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಇದು ಬ್ರಿಟಿಷ್ ಪಾಕಿಸ್ತಾನಿ ಜನರ ಸುಲಭ ಪ್ರಯಾಣ ಮತ್ತು ಜನರೊಂದಿಗೆ ವಿನಿಮಯ ಹೆಚ್ಚಿಸುವ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ವಿವರಿಸಿದ್ದಾರೆ.
Advertisement