
ಮಾಲಿ: ವಿದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗಿ, ಭಾರತ ಸರ್ಕಾರ ಮಾಲ್ಡೀವ್ಸ್‌ಗೆ 4,850 ಕೋಟಿ ರೂ. ಮೌಲ್ಯದ ಸಾಲ ನೀಡುವುದನ್ನು ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಲಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ ವ್ಯಾಪಕ ಮಾತುಕತೆಗಳ ನಂತರ, ಮೋದಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನಗಳನ್ನು ಘೋಷಿಸಿದರು. ಮಾಲ್ಡೀವ್ಸ್‌ನ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು ಭಾರತದ ಬೆಂಬಲವನ್ನು ಇದೇ ವೇಳೆ ಪುನರುಚ್ಚರಿಸಿದರು.
"ಮಾಲ್ಡೀವ್ಸ್‌ನ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಾಗಲು ಭಾರತ ಹೆಮ್ಮೆಪಡುತ್ತದೆ" ಎಂದು ಮೋದಿ ಹೇಳಿದ್ದಾರೆ. ಭಾರತದ 'ನೆರೆಹೊರೆಯವರು ಮೊದಲು' ನೀತಿ ಮತ್ತು ಮಹಾಸಾಗರ ದೃಷ್ಟಿಕೋನದಲ್ಲಿ ದ್ವೀಪ ರಾಷ್ಟ್ರದ ಪ್ರಾಮುಖ್ಯತೆಯನ್ನು ಮೋದಿ ಈಗ ಒತ್ತಿ ಹೇಳಿದ್ದಾರೆ.
'ಇಂಡಿಯಾ ಔಟ್' ಅಭಿಯಾನದ ಮೂಲಕ ಅಧಿಕಾರಕ್ಕೆ ಬಂದಿದ್ದ ಮುಯಿಝು ಕೆಲವು ತಿಂಗಳುಗಳ ಉದ್ವಿಗ್ನತೆ ಎದುರಿಸಿದ್ದರು. ಈಗ ಸ್ವತಃ ಮೊಯಿಝು ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.
ಅಧ್ಯಕ್ಷರಾಗಿ ಮೊದಲ ಕ್ರಮಗಳ ಪೈಕಿ ಭಾರತೀಯ ಸೇನಾ ಸಿಬ್ಬಂದಿಯನ್ನು ನಂತರ ನಾಗರಿಕರಿಂದ ಹಿಂತೆಗೆದುಕೊಳ್ಳುವಂತೆ ಮೊಯಿಝು ಒತ್ತಾಯಿಸಿದ್ದರು.
ಮೊಯಿಝು ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲಿ ಭಾರತ- ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತಾದರೂ, ಭಾರತದ ನಿರಂತರ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ನೆರವು ಸಂಬಂಧವನ್ನು ಪುನಃಸ್ಥಾಪಿಸಿದಂತೆ ಕಾಣುತ್ತಿದೆ.
"ನಾವು ಕೆಲಸ ಮಾಡುವುದನ್ನು ಮುಂದುವರಿಸಿದ್ದೇವೆ ಮತ್ತು ಫಲಿತಾಂಶವು ನಿಮ್ಮ ಕಣ್ಣ ಮುಂದೆ ಇದೆ ಎಂದು ನಾನು ಭಾವಿಸುತ್ತೇನೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಇದು ಭಾರತ-ಮಾಲ್ಡೀವ್ಸ್ ಸಂಬಂಧಗಳಲ್ಲಿ ಹೊಸ ಆವೇಗವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
Advertisement