
ವಾಷಿಂಗ್ಟನ್: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಕದನ ವಿರಾಮ ಮಾತುಕತೆಗೆಒಪ್ಪಿಕೊಂಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ರೂತ್'ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ಮತ್ತು ಥೈಲ್ಯಾಂಡ್‌ನ ಹಂಗಾಮಿ ಪ್ರಧಾನಿ ಫುಮ್ಥಾಮ್ ವೆಚಾಯಾಚೈ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಸಂಘರ್ಷ ಮುಂದುವರಿಸುವುದರಿಂದ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳಿಗೆ ಅಡ್ಡಿಯಾಗಬಹುದು ಎಂದು ಇಬ್ಬರೂ ನಾಯಕರಿಗೆ ಎಚ್ಚರಿಕೆ ನೀಡಿದ್ದೇನೆ. ಎರಡೂ ರಾಷ್ಟ್ರಗಳು ತಕ್ಷಣದ ಕದನ ವಿರಾಮ ಮತ್ತು ಶಾಂತಿಯನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.
ಆದರೆ, ಶ್ವೇತಭವನವಾಗಲಿ ಅಥವಾ ರಾಯಭಾರಿ ಕಚೇರಿಯಾಗಲಿ ಪ್ರಸ್ತಾವಿತ ಮಾತುಕತೆಯ ಸಮಯ ಅಥವಾ ವಿವರಗಳನ್ನು ದೃಢಪಡಿಸಿಲ್ಲ.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಎರಡು ದೇಶಗಳ ನಡುವಿನ ಕ್ಷಿಪಣಿ ದಾಳಿಯಲ್ಲಿ 33 ಜನರು ಮೃತಪಟ್ಟಿದ್ದಾರೆ. 1.68 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಥಾಯ್ಲೆಂಡ್ ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿರುವುದಾಗಿ ಕಾಂಬೋಡಿಯಾ ಹೇಳಿದೆ. ಕಾಂಬೋಡಿಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಥಾಯ್ಲೆಂಡ್ ಹೇಳಿದೆ.
Advertisement