
ತೈಫ್: ಸೌದಿ ಅರೇಬಿಯಾದ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ '360 ಡಿಗ್ರಿ ರೈಡ್' ದಿಢೀರ್ ಮುರಿದು ಬಿದ್ದಿದ್ದು, ಈ ವೇಳೆ ರೈಡ್ ನಲ್ಲಿದ್ದ ಕನಿಷ್ಠ 23 ಮಂದಿ ಗಾಯಗೊಂಡಿದ್ದಾರೆ.
ಸೌದಿ ಅರೇಬಿಯಾದ ತೈಫ್ ಬಳಿಯ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪಾರ್ಕ್ ನಲ್ಲಿದ್ದ '360 ಡಿಗ್ರಿ ರೈಡ್' ಚಾಲ್ತಿಯಲ್ಲಿರುವಾಗಲೇ ತುಂಡಾಗಿ ನೆಲಕ್ಕೆ ಕುಸಿದಿದೆ. ಈ ವೇಳೆ ಅದರಲ್ಲಿದ್ದವರ ಪೈಕಿ 23 ಮಂದಿ ಗಾಯಗೊಂಡಿದ್ದಾರೆ.
ಅರ್ಧಕ್ಕೆ ತುಂಡಾದ '360 ಡಿಗ್ರಿ ರೈಡ್'
ಸುಮಾರು 40 ಮಂದಿ ಕುಳಿತಿದ್ದ 360 ಡಿಗ್ರಿ ರೈಡ್ ಚಾಲನೆಯಲ್ಲಿರುವಾಗ ದಿಢೀರನೆ ಅದರ ವೇಗ ಹೆಚ್ಚಾಗಿದೆ. ಈ ವೇಳೆ ಅದರಲ್ಲಿ ಕುಳಿತಿದ್ದ ಜನ ಕೂಗಿದ್ದು, ನೋಡ ನೋಡುತ್ತಲೇ 360 ಡಿಗ್ರಿಯ ಮಧ್ಯದ ಕಂಬ ಅರ್ಧಕ್ಕೆ ಮುರಿದಿದೆ.
ಈ ವೇಳೆ ಅದರ ಕೆಳಭಾಗದಲ್ಲಿ ಜನರಿದ್ದ ವೇದಿಕೆ ದೊಡ್ಡ ಶಬ್ದದೊಂದಿಗೆ ನೆಲಕ್ಕೆ ಕುಸಿದಿದೆ. ಈ ವೇಳೆ ಅದರಲ್ಲಿ ಸವಾರರು ಇನ್ನೂ ಅದರ ಮೇಲೆ ಕುಳಿತಿದ್ದರು.
23 ಮಂದಿಗೆ ಗಾಯ
ಇನ್ನು ಈ ದುರಂತದಲ್ಲಿ 23 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸುತ್ತಲೇ ಭದ್ರತಾ ಪಡೆಗಳು ಮತ್ತು ತುರ್ತು ಪ್ರತಿಕ್ರಿಯೆ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಏತನ್ಮಧ್ಯೆ, ಸಂಬಂಧಿತ ಅಧಿಕಾರಿಗಳು ರೈಡ್‌ನ ಅಸಮರ್ಪಕ ಕಾರ್ಯದ ಕಾರಣದ ಬಗ್ಗೆ ತುರ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಏನು ತಪ್ಪಾಗಿದೆ ಎಂಬುದನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಯುವ ಗುರಿಯನ್ನು ಹೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement