
ವಾಷಿಂಗ್ಟನ್ ಡಿಸಿ: ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿರುವುದು ಪಕ್ಷ ವಿರೋಧಿ ಚಟುವಟಿಕೆ ಅಂದುಕೊಂಡವರು ನನ್ನ ಕಡೆ ಬೊಟ್ಟು ಮಾಡುವ ಮೊದಲು ಅವರನ್ನೇ ಪ್ರಶ್ನೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರ್ ನಂತರ ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಜಗತ್ತಿಗೆ ಸಾರಲು ಅಮೆರಿಕಕ್ಕೆ ತೆರಳಿರುವ ಸರ್ವ ಪಕ್ಷ ನಿಯೋಗಕ್ಕೆ ಶಶಿ ತರೂರ್ ನಾಯಕರಾಗಿದ್ದಾರೆ.
ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ: ಪ್ರಾಮಾಣಿಕವಾಗಿ, ಯಾರೇ ಆಗಲಿ ರಾಷ್ಟ್ರ ಸೇವೆ ಮಾಡುವಾಗ, ಇದರ ಬಗ್ಗೆ ಬೇರೊಬ್ಬರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಪಿಟಿಐ ವಿಡಿಯೋಗೆ ನೀಡಿದ ಸಂದರ್ಶನದಲ್ಲಿ ಅವರು ಬುಧವಾರ ಹೇಳಿದರು.
ವಿದೇಶದಲ್ಲಿ ಅವರು ನೀಡಿರುವ ಹೇಳಿಕೆಯನ್ನು ಅವರದ್ದೇ ಪಕ್ಷದ ಕೆಲವು ನಾಯಕರು ಟೀಕಿಸುತ್ತಿರುವುದರಿಂದ ವಿದೇಶಕ್ಕೆ ತೆರಳಿರುವ ಸರ್ವ ಪಕ್ಷ ನಿಯೋಗದ ನಾಯಕರಲ್ಲಿ ನೀವು ಕೇಂದ್ರಬಿಂದುವಾಗಿದ್ದೀರಿ. ಅಂತವರಿಗೆ ಯಾವ ಸಂದೇಶ ನೀಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದನ್ನು ಪಕ್ಷ ವಿರೋಧಿ ಚಟುವಟಿಕೆ ಅಂತಾ ಪರಿಗಣಿಸುವವರು ನನ್ನಗಿಂತಲೂ ಅವರನ್ನೇ ಪ್ರಶ್ನೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಹೆಚ್ಚಿನ ಪ್ರಾಮುಖ್ಯದ ಸಂದೇಶದತ್ತ ನಮ್ಮ ಗಮನ: ಈ ಹಂತದಲ್ಲಿ ನಾವು ನಮ್ಮ ಗುರಿಯತ್ತ ಗಮನ ಹರಿಸಿದ್ದೇವೆ ಎಂದು ಪ್ರಾಮಾಣಿಕವಾಗಿ ಅನಿಸುತ್ತಿದೆ. ಯಾರು ಏನಾದರೂ ಹೇಳಲಿ ಅಥಾ ಹೇಳಲಿ ಆ ಕಡೆಗೆ ಹೆಚ್ಚಿನ ಸಮಯ ನೀಡುವ ಅಗತ್ಯವಿಲ್ಲ. ಏಕೆಂದರೆ, ಇದಕ್ಕಿಂತ ಹೆಚ್ಚಿನ ಪ್ರಾಮುಖ್ಯದ ಸಂದೇಶದತ್ತ ನಾವು ಗಮನ ಕೇಂದ್ರೀಕರಿಸಬೇಕಾಗಿದೆ. ಆ ಸಂದರ್ಭ ಬಂದಾಗ ಅದನ್ನು ನಿಭಾಯಿಸುತ್ತೇನೆ ಎಂದು ತರೂರ್ ಹೇಳಿದರು. ಇಂದು ಭಾರತದಲ್ಲಿ ದೇಶಪ್ರೇಮಿಯಾಗುವುದು ತುಂಬಾ ಕಷ್ಟ ಎಂಬ ತನ್ನ ಸ್ನೇಹಿತ ಸಲ್ಮಾನ್ ಖುರ್ಷಿದ್ ಹೇಳಿಕೆಯನ್ನು ಗಮನಿಸಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.
ಕಾಂಗ್ರೆಸ್ ನಲ್ಲಿರುತ್ತಾರೋ, ಬಿಜೆಪಿ ಸೇರುತ್ತಾರೋ? ತರೂರ್ ಕಾಂಗ್ರೆಸ್‌ನಲ್ಲಿ ಮುಂದುವರಿಯುತ್ತಾರೋ ಅಥವಾ ಬಿಜೆಪಿಗೆ ಸೇರುತ್ತಾರೋ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿರುವ ಊಹಾಪೋಹ ಕುರಿತು ಪ್ರತಿಕ್ರಿಯಿಸಿದ ಶಶಿ ತರೂರ್, ನಾನು ಸಂಸತ್ತಿನ ಚುನಾಯಿತ ಸದಸ್ಯ. ನನ್ನ ಅಧಿಕಾರವಧಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಏಕೆ ಇಂತಹ ಪ್ರಶ್ನೆ ಕೇಳಲಾಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದರು.
ರಾಜಕೀಯ ಉದ್ದೇಶಕ್ಕಾಗಿ ಬಂದಿಲ್ಲ:
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದ ನಂತರ ಶರಣಾಗಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ತರೂರ್, ಪ್ರಜಾಪ್ರಭುತ್ವದಲ್ಲಿ ಇದು ಸಾಮಾನ್ಯವಾಗಿದೆ, ಪಕ್ಷಗಳು ಹೋರಾಡುತ್ತವೆ, ಟೀಕೆಗಳನ್ನು ವ್ಯಕ್ತಪಡಿಸುತ್ತವೆ ಮತ್ತು ಬೇಡಿಕೆಗಳನ್ನು ನೀಡುತ್ತವೆ. ನಾವು ಇಲ್ಲಿ ಪಕ್ಷವೊಂದರ ರಾಜಕೀಯ ಉದ್ದೇಶಕ್ಕಾಗಿ ಬಂದಿಲ್ಲ. ಅಖಂಡ ಭಾರತದ ಪ್ರತಿನಿಧಿಗಳಾಗಿ ಬಂದಿದ್ದೇವೆ. ನಿಯೋಗದಲ್ಲಿ ಮೂರು ಧರ್ಮಗಳ, ಏಳು ರಾಜ್ಯಗಳ ಐದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇರುವುದಾಗಿ ತಿಳಿಸಿದರು.
ಶಶಿ ತರೂರ್ ಅವರಲ್ಲದೆ ಸಂಸದರಾದ ಸರ್ಫರಾಜ್ ಅಹ್ಮದ್, ಘಂಟಿ ಹರೀಶ್ ಮಧುರ್ ಬಾಲಯೋಗಿ, ಶಶಾಂಕ್ ಮಣಿ ತ್ರಿಪಾಠಿ, ಭುವನೇಶ್ವರ್ ಕಲಿತಾ, ಮಿಲಿಂದ್ ದಿಯೋರಾ, ತೇಜಸ್ವಿ ಸೂರ್ಯ ಮತ್ತು ಅಮೆರಿಕದ ಭಾರತದ ಮಾಜಿ ರಾಯಭಾರಿ ತರಂಜಿತ್ ಸಂಧು ನಿಯೋಗದಲ್ಲಿದ್ದಾರೆ. ಅವರು ಮೇ 24 ರಂದು ಭಾರತದಿಂದ ನ್ಯೂಯಾರ್ಕ್‌ಗೆ ಬಂದಿಳಿದಿದ್ದರು. ವಾಷಿಂಗ್ಟನ್‌ಗೆ ಆಗಮಿಸುವ ಮುನ್ನಾ ಗಯಾನಾ, ಪನಾಮಾ, ಕೊಲಂಬಿಯಾ ಮತ್ತು ಬ್ರೆಜಿಲ್ ದೇಶಗಳಿಗೆ ಭೇಟಿ ನೀಡಿತ್ತು.
ಇದಕ್ಕಿಂತಲೂ ಬೇರೆ ದೊಡ್ಡದಿಲ್ಲ: ಇದು ಭಾರತದ ವೈವಿಧ್ಯತೆಯ ಪ್ರತಿಬಿಂಬವಾಗಿದೆ. ಏಕೀಕೃತ ಸಂದೇಶದೊಂದಿಗೆ ಬಂದಿದ್ದೇವೆ. ಆದ್ದರಿಂದ ವೈವಿಧ್ಯತೆಯಲ್ಲಿಯೂ ಏಕತೆ ಇದೆ. ಈ ಗುಂಪಿನಲ್ಲಿ ಮತ್ತು ನನ್ನ ಮನಸ್ಸಿನಲ್ಲಿ ನಮ್ಮ ಗಮನವು ಆ ಏಕೀಕೃತ ಸಂದೇಶದ ಮೇಲೆ ಇರಬೇಕು, ಏಕೆಂದರೆ ರಾಷ್ಟ್ರೀಯ ಹಿತಾಸಕ್ತಿ, ರಾಷ್ಟ್ರೀಯ ಭದ್ರತೆ, ಪ್ರಾಮಾಣಿಕ ವಿಚಾರ ಬಂದಾಗ ಅದಕ್ಕಿಂತಲೂ ದೊಡ್ಡದಿಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.
ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಗಡಿಯ ಅಂಚಿನಲ್ಲಿ ನಿಲ್ಲುತ್ತವೆ ಎಂಬ ಅವರ ಹಳೆಯ ಸಂದರ್ಶನವನ್ನು ಉಲ್ಲೇಖಿಸಿದ ಶಶಿ ತರೂರ್, ನೀವು ಒಮ್ಮೆ ಗಡಿ ದಾಟಿದರೆ, ಭಾರತೀಯರು ಮತ್ತು ನಿಮ್ಮ ಇತರ ನಿಷ್ಠೆಗಳು ಎರಡನೆಯದಾಗಿರುತ್ತವೆ ಎಂದು ಹೇಳಿದರು.
Advertisement