
ಇರಾನ್ ಮತ್ತು ಇಸ್ರೇಲ್ ಸಂಘರ್ಷದಲ್ಲಿ ಇಸ್ರೇಲ್ ಮೆಗಾ ಬೇಟೆಯನ್ನಾಡಿದೆ. ಯೆಮೆನ್ ರಾಜಧಾನಿ ಸನಾದಲ್ಲಿ ಹಿರಿಯ ಹೌತಿ ನಾಯಕರ ರಹಸ್ಯ ಸಭೆ ನಡೆಯುತ್ತಿದ್ದ ಮನೆ ಮೇಲೆ ಇಸ್ರೇಲ್ (Iran-Israel War) ವಾಯುದಾಳಿ ನಡೆಸಿದ್ದು ದಾಳಿಯಲ್ಲಿ ಪ್ರಮುಖ ನಾಯಕರೇ ಹತರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ದಕ್ಷಿಣ ಸನಾದಲ್ಲಿರುವ ಮನೆಯನ್ನು ಹೌತಿ ಭದ್ರತಾ ಪಡೆಗಳು ಸುತ್ತುವರೆದಿವೆ ಎಂದು ಭಾರತದ ಡೈಜಿವರ್ಲ್ಡ್ ಮೀಡಿಯಾ ನೆಟ್‌ವರ್ಕ್ ಮತ್ತು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿದ್ದು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ದೌಡಾಯಿಸಿದ್ದವು.
ಪ್ರಾದೇಶಿಕ ಮಾಧ್ಯಮ ವರದಿಗಳ ಪ್ರಕಾರ, ಸಭೆಯ ಅಧ್ಯಕ್ಷತೆಯನ್ನು ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್‌ನ ಮುಖ್ಯಸ್ಥ ಮಹ್ದಿ ಅಲ್-ಮಶಾತ್ ಮತ್ತು ಹೌತಿ ಮಿಲಿಟರಿ ಮುಖ್ಯಸ್ಥ ಅಬ್ದುಲ್ಕರೀಮ್ ಅಲ್-ಗುಮಾರಿ ವಹಿಸಿದ್ದರು. ರಹಸ್ಯ ಸಭೆಯಲ್ಲಿ ಉನ್ನತ ಹೌತಿ ನಾಯಕ ಅಬ್ದುಲ್-ಮಲಿಕ್ ಅಲ್-ಹೌತಿ; ಹೌತಿ ಸುಪ್ರೀಂ ರೆವಲ್ಯೂಷನರಿ ಕಮಿಟಿಯ ಮುಖ್ಯಸ್ಥ ಮೊಹಮ್ಮದ್ ಅಲಿ ಅಲ್-ಹೌತಿ ಕೂಡ ಭಾಗವಹಿಸಿದ್ದರು. ಇನ್ನು ಹೌತಿ ಮಿಲಿಟರಿ ಗುಪ್ತಚರ ಮುಖ್ಯಸ್ಥ ಅಬು ಅಲಿ ಅಲ್-ಹಕೀಮ್ ಸಹ ಸಭೆಯಲ್ಲಿದ್ದರು ಎಂದು ವರದಿಯಾಗಿವೆ.
ಯೆಮೆನ್‌ನ ಹೌತಿ ಗುಂಪುಗಳ ಉನ್ನತ ಮಿಲಿಟರಿ ಕಮಾಂಡರ್ ಮೊಹಮ್ಮದ್ ಅಬ್ದುಲ್-ಕರೀಮ್ ಅಲ್-ಘಮರಿಯನ್ನು ಸನಾದಲ್ಲಿ ಹತ್ಯೆ ಮಾಡಲು ಇಸ್ರೇಲ್ ಯತ್ನಿಸಿತ್ತು ಎಂದು ಇಸ್ರೇಲಿ ಮಾಧ್ಯಮ ಸಂಸ್ಥೆ Ynetnews.com ವರದಿ ಮಾಡಿದೆ. ಅಲ್-ಘಮರಿ ಮೃತಪಟ್ಟಿದ್ದಾರೆಯೇ ಅಥವಾ ಆ ಸಮಯದಲ್ಲಿ ಬೇರೆ ಯಾರು ಇದ್ದರು ಎಂಬುದು ಸೇರಿದಂತೆ ದಾಳಿಯ ಫಲಿತಾಂಶ ಇನ್ನೂ ತಿಳಿದಿಲ್ಲ ಎಂದು Ynetnews.com ವರದಿ ಮಾಡಿದೆ. ಸ್ಥಳದಲ್ಲಿ ಕನಿಷ್ಠ 10 ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆದಾಗ್ಯೂ, ಅನ್ಸಾರ್ ಅಲ್ಲಾ ರಾಜಕೀಯ ಬ್ಯೂರೋದ ಸದಸ್ಯ ಹಜಮ್ ಅಲ್-ಅಸ್ಸಾದ್ ಇಸ್ರೇಲ್ ತನ್ನ ಹೆಚ್ಚುತ್ತಿರುವ ವೈಫಲ್ಯಗಳನ್ನು ಮುಚ್ಚಿಹಾಕಲು ಸುಳ್ಳು ವಿಜಯಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ, ಭಾನುವಾರ ಸ್ಥಳೀಯ ಕಾಲಮಾನದ ಪ್ರಕಾರ ಚೀನಾದ ಸಿಸಿಟಿವಿಯಲ್ಲಿ ಹೌತಿ ಬಂಡುಕೋರರ ಉನ್ನತ ಅಧಿಕಾರಿಯ ಹತ್ಯೆಯ ವರದಿಗಳಿಗೆ ಸಂಬಂಧಿಸಿದಂತೆ ಹೌತಿ ಬಂಡುಕೋರರ ಮಾಹಿತಿ ಇಲಾಖೆಯ ಹಿರಿಯ ಅಧಿಕಾರಿಯಿಂದ ಪರಿಶೀಲನೆ ಕೋರಲಾಗಿದೆ ಎಂದು ಹೇಳಲಾಗಿದೆ. ಶನಿವಾರ ಸಂಜೆ ಯಾವುದೇ ದಾಳಿ ಅಥವಾ ಸ್ಫೋಟ ಸಂಭವಿಸಿಲ್ಲ ಎಂದು ಹೇಳುತ್ತಾ ಹೌತಿ ಬಂಡುಕೋರರು ಈ ಹೇಳಿಕೆಗಳನ್ನು "ಕಟ್ಟುಕಥೆ" ಎಂದು ತಳ್ಳಿಹಾಕಿದರು.
ಇಸ್ರೇಲ್ ಮತ್ತು ಇರಾನ್ ಕ್ಷಿಪಣಿ ದಾಳಿಗಳನ್ನು ಮುಂದುವರೆಸುತ್ತಿರುವುದರಿಂದ ಇರಾನ್ ಬೆನ್ನಿಗೆ ನಿಂತಿರುವ ನಾವು ಕಳೆದ 24 ಗಂಟೆಗಳಲ್ಲಿ ಮಧ್ಯ ಇಸ್ರೇಲ್‌ನ ಜಾಫಾದ ಮೇಲೆ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗ ಮೂಲಕ ದಾಳಿ ನಡೆಸಿದ್ದೇವೆ ಎಂದು ಹೌತಿ ಬಂಡುಕೋರರು ನಿನ್ನೆ ಹೇಳಿದ್ದಾರೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
Advertisement