
ಇಸ್ರೇಲ್ ಸೇನೆ ತೆಹ್ರಾನ್‌ನ ದಕ್ಷಿಣದಲ್ಲಿರುವ ಕೋಮ್ ಮೇಲೆ ನಡೆಸಿದ ದಾಳಿಯಲ್ಲಿ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಹಮಾಸ್ ಜೊತೆ ಮಿಲಿಟರಿ ಸಮನ್ವಯದ ಉಸ್ತುವಾರಿ ವಹಿಸಿದ್ದ ಉನ್ನತ ಇರಾನಿನ ಕಮಾಂಡರ್ ಒಬ್ಬರನ್ನು ಕೊಂದಿದೆ ಎಂದು ಹೇಳಿದೆ.
ಇಸ್ರೇಲ್ "ಕುಡ್ಸ್ ಫೋರ್ಸ್‌ನ ಪ್ಯಾಲೆಸ್ಟೈನ್ ಕಾರ್ಪ್ಸ್‌ನ ಕಮಾಂಡರ್ ಮತ್ತು ಇರಾನ್ ಆಡಳಿತ ಮತ್ತು ಹಮಾಸ್ ಭಯೋತ್ಪಾದಕ ಸಂಘಟನೆಯ ನಡುವಿನ ಪ್ರಮುಖ ಸಂಯೋಜಕ ಸಯೀದ್ ಇಜಾದಿ ಅವರನ್ನು ಕೋಮ್ ಪ್ರದೇಶದಲ್ಲಿ ಇಸ್ರೇಲ್ ಫೈಟರ್ ಜೆಟ್‌ಗಳು ಹೊಡೆದುರುಳಿಸಿ ನಿರ್ಮೂಲನೆ ಮಾಡಿದೆ" ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕುಡ್ಸ್ ಫೋರ್ಸ್ ಇರಾನ್‌ನ ಪ್ರಬಲ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ವಿದೇಶಿ ಕಾರ್ಯಾಚರಣೆ ವಿಭಾಗವಾಗಿದೆ.
ಇಜಾದಿ ಲೆಬನಾನ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಪಡೆಗಳನ್ನು ನಿರ್ದೇಶಿಸಿದ್ದಾರೆ ಮತ್ತು ಗಾಜಾದಲ್ಲಿ ಹಮಾಸ್ ತನ್ನ ಸಶಸ್ತ್ರ ವಿಭಾಗವನ್ನು ಪುನರ್ನಿರ್ಮಿಸಲು ಸಹಾಯ ಮಾಡಿದ್ದಾರೆ ಎಂದು ಸೇನೆ ಹೇಳಿದೆ.
ಶನಿವಾರ ನಡೆದ ಬ್ರೀಫಿಂಗ್‌ನಲ್ಲಿ ಇಸ್ರೇಲ್ ಇತರ ಇಬ್ಬರು ಇರಾನಿನ ಕಮಾಂಡರ್‌ಗಳಾದ ಬೆಹ್ನಮ್ ಶಹ್ರಿಯಾರಿ ಮತ್ತು ಅಮಿನ್‌ಪೌರ್ ಜುಡಾಕಿಯನ್ನು ರಾತ್ರೋರಾತ್ರಿ ಕೊಂದಿದೆ ಎಂದು ಸೇನಾ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಇಸ್ರೇಲ್ ನ್ನು ನಿರ್ಮೂಲನೆ ಮಾಡುವುದು" ಗುರಿಯಾಗಿದ್ದ ಇರಾನ್‌ನ ಕುಡ್ಸ್ ಪಡೆಯ 190ನೇ ಘಟಕದ ಮುಖ್ಯಸ್ಥನಾಗಿ ಶಹರಿಯಾರಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
"ಹಮಾಸ್‌ಗೆ ಇಜಾದಿ ಹೇಗಿದ್ದನೋ, ಹೆಜ್ಬೊಲ್ಲಾಗೆ ಶಹರಿಯಾರಿ ಆ ರೀತಿ ಇದ್ದನು" ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. "ಇಸ್ರೇಲ್ ನ್ನು ನಾಶಮಾಡುವ ಗುರಿಯನ್ನು ಹೊಂದಿರುವ ಈ ಭಯೋತ್ಪಾದಕ ಸಂಘಟನೆಗಳಿಗೆ ಹಣವನ್ನು ವರ್ಗಾಯಿಸುವ ಜವಾಬ್ದಾರಿ ಅವರ ಮೇಲಿತ್ತು" ಎಂದು ಆ ಅಧಿಕಾರಿ ಹೇಳಿದ್ದಾರೆ.
IRGC ಯಲ್ಲಿನ ಡ್ರೋನ್ ಘಟಕದ ಉಸ್ತುವಾರಿಯನ್ನು ಜುಡಾಕಿ ವಹಿಸಿದ್ದರು. "ಇಸ್ರೇಲ್ ವಿರುದ್ಧ ನೂರಾರು UAV ದಾಳಿಗಳಿಗೆ ಅವರು ಜವಾಬ್ದಾರರು" ಎಂದು ಅಧಿಕಾರಿ ಹೇಳಿದ್ದಾರೆ. ತೆಹ್ರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಅಂಚಿನಲ್ಲಿದೆ ಎಂದು ವಾದಿಸಿ ಇಸ್ರೇಲ್ ಇರಾನ್ ಮೇಲೆ ಬೃಹತ್ ದಾಳಿಗಳ ಅಲೆಯನ್ನು ಪ್ರಾರಂಭಿಸಿದಾಗ ಹೋರಾಟ ಪ್ರಾರಂಭವಾಗಿದೆ.
Advertisement