
ನವದೆಹಲಿ: ಇರಾನ್ ಮೇಲೆ ದಾಳಿ ಮಾಡುವ ಮೂಲಕ ಇಸ್ರೇಲ್ ಯುದ್ಧ ಆರಂಭಿಸಿದರೆ, ಇತ್ತ ಅಮೆರಿಕ ಕೂಡ ಇರಾನ್ ನ ಅಣು ಸ್ಥಾವರ ಗಳ ಮೇಲೆ ದಾಳಿ ಮಾಡಿ ಎರಡು ದೇಶಗಳ ನಡುವಿನ ಯುದ್ಧಕ್ಕೆ ತಾನೂ ಕೂಡ ಎಂಟ್ರಿಕೊಟ್ಟಿದೆ.
ಈ ನಡುವೆ ಇರಾನ್ ಮಿತ್ರ ರಾಷ್ಟ್ರ ಯೆಮೆನ್ ದೊಡ್ಡ ಸಂದೇಶವೊಂದನ್ನು ರವಾನೆ ಮಾಡಿದ್ದು ತಾನು ಇರಾನ್ ಪರ ಅಮೆರಿಕ ವಿರುದ್ಧ ಯುದ್ಧ ಮಾಡುವುದಾಗಿ ಘೋಷಣೆ ಮಾಡಿದೆ.
ಹೌದು.. ಭಾನುವಾರ ಇರಾನ್‌ನಲ್ಲಿನ ಪರಮಾಣು ನೆಲೆಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದ ನಂತರ, ಯೆಮೆನ್‌ನ ಹೌತಿ ಬಂಡುಕೋರರು ಅಮೆರಿಕ ವಿರುದ್ಧ ಯುದ್ಧ ಘೋಷಣೆ ಮಾಡಿದ್ದು, ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳ ಮೇಲೆ ದಾಳಿ ಮಾಡುವ ತಮ್ಮ ಹಿಂದಿನ ಬದ್ಧತೆಯಂತೆ ಕಾರ್ಯನಿರ್ವಹಿಸುವುದಾಗಿ ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿ ಇದು ಉದ್ವಿಗ್ನತೆಯ ಪ್ರಮುಖ ಘಟನೆಯಾಗಿದ್ದು, ಕೆಂಪು ಸಮುದ್ರದಲ್ಲಿ ಸಂಘರ್ಷ ತಾರಕಕ್ಕೇರುವ ಭೀತಿ ಆರಂಭವಾಗಿದೆ.
"ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳು ಮತ್ತು ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿ ಮಾಡಲು ನಾವು ಸಿದ್ಧರಿದ್ದೇವೆ. ಸಶಸ್ತ್ರ ಪಡೆಗಳ ಘೋಷಣೆಗೆ ಯೆಮೆನ್ ಗಣರಾಜ್ಯದ ಬದ್ಧತೆಯನ್ನು ನಾವು ದೃಢಪಡಿಸುತ್ತೇವೆ" ಎಂದು ಭಾನುವಾರ ಮುಂಜಾನೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ ನಂತರ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರ ಗುಂಪು ಇರಾನ್ ನೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದು, "ಮೂರು ಇರಾನ್ ಪರಮಾಣು ತಾಣಗಳ ವಿರುದ್ಧ ಟ್ರಂಪ್ ಆಡಳಿತದ ಅಜಾಗರೂಕ ಆಕ್ರಮಣವು ಸಹೋದರ ಇರಾನ್ ಜನರ ವಿರುದ್ಧದ ಯುದ್ಧದ ಸ್ಪಷ್ಟ ಘೋಷಣೆಯಾಗಿದೆ" ಎಂದು ಹೇಳಿದೆ.
ಶನಿವಾರ, ಇರಾನ್ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಅಮೆರಿಕ ಇಸ್ರೇಲ್ ಅನ್ನು ಬೆಂಬಲಿಸಿದರೆ, ಕೆಂಪು ಸಮುದ್ರದಲ್ಲಿ ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ತಾನು ದಾಳಿ ಮಾಡುವುದಾಗಿ ಹೌತಿ ಬಂಡುಕೋರರು ಘೋಷಣೆ ಮಾಡಿದ್ದಾರೆ.
ಗಮನಾರ್ಹವಾಗಿ, ಅಮೆರಿಕ ಮತ್ತು ಹೌತಿಗಳು ಮೇ ತಿಂಗಳಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು, ಅದರ ಅಡಿಯಲ್ಲಿ ಯಾವುದೇ ಪಕ್ಷವು ಇನ್ನೊಂದನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವಂತಿರಲ್ಲಿಲ್ಲ. ಆದರೆ ಇದೀಗ ಇರಾನ್ ಮೇಲೆ ಅಮೆರಿಕ ದಾಳಿ ಮಾಡಿರುವುದರಿಂದ ಹೌತಿ ಬಂಡುಕೋರರು ಅಮೆರಿಕ ಮೇಲೆ ದಾಳಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಸಾರ್ವಕಾಲಿಕ ಉತ್ತುಂಗಕ್ಕೇರಿದ ಉದ್ವಿಗ್ನತೆ
ಇನ್ನು ಇರಾನ್ ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕವು "ಅತ್ಯಂತ ಯಶಸ್ವಿ ದಾಳಿ"ಯನ್ನು ಪೂರ್ಣಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಗಳು ನಾಟಕೀಯವಾಗಿ ಹೆಚ್ಚಾಗಿವೆ.
ಕತಾರ್ ಆತಂಕ
ಪ್ರಮುಖವಾಗಿ ಮಧ್ಯಪ್ರಾಚ್ಯದ ಅತಿದೊಡ್ಡ ಅಮೆರಿಕ ಮಿಲಿಟರಿ ನೆಲೆಯ ಆತಿಥೇಯ ಕತಾರ್, ಇರಾನ್‌ನಲ್ಲಿನ ಪರಮಾಣು ಸೌಲಭ್ಯಗಳ ಮೇಲೆ ಯುಎಸ್ ವೈಮಾನಿಕ ದಾಳಿಯ ನಂತರ ಗಂಭೀರ ಪರಿಣಾಮಗಳ ಭಯವಿದೆ ಎಂದು ಭಾನುವಾರ ಹೇಳಿದೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಪರಮಾಣು ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸಿದ್ದ ಓಮನ್ ಕೂಡ ಈ ದಾಳಿಗಳನ್ನು ಖಂಡಿಸಿದೆ.
ಪ್ಯಾಲೆಸ್ಟೀನಿಯನ್ನರು ಮತ್ತು ಗಾಜಾವನ್ನು ನಿಯಂತ್ರಿಸುವ ಇಸ್ಲಾಮಿಸ್ಟ್ ಗುಂಪಾದ ಹಮಾಸ್‌ಗೆ ಬೆಂಬಲ ನೀಡುವ ಪ್ರದರ್ಶನವಾಗಿ ಹೌತಿಗಳು ಕೆಂಪು ಸಮುದ್ರದಲ್ಲಿನ ಹಡಗು ಮಾರ್ಗಗಳ ಮೇಲೆ ದಾಳಿ ಮಾಡುವ ಮೂಲಕ ಗಾಜಾ ಸಂಘರ್ಷಕ್ಕೆ ಇಳಿದಿದ್ದಾರೆ. ಅವರು ಅಡೆನ್ ಕೊಲ್ಲಿಯಲ್ಲಿ ಇಸ್ರೇಲಿ-ಸಂಬಂಧಿತ ಹಡಗುಗಳ ಮೇಲೆ ದಾಳಿಗಳನ್ನು ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Advertisement