
ಇರಾನ್‌ನ ಉನ್ನತ ಶಿಯಾ ಧರ್ಮಗುರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ 'ಫತ್ವಾ' ಅಥವಾ ಧಾರ್ಮಿಕ ಆದೇಶ ಹೊರಡಿಸಿದ್ದು ಇವರುಗಳು 'ಅಲ್ಲಾಹನ ಶತ್ರುಗಳು' ಎಂದು ಕರೆದಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ನಾಯಕತ್ವಕ್ಕೆ ಬೆದರಿಕೆ ಹಾಕುವ ಅಮೆರಿಕ ಮತ್ತು ಇಸ್ರೇಲಿ ನಾಯಕರನ್ನು ಒಗ್ಗೂಡಿ ತೊಲಗಿಸಬೇಕು ಎಂದು ಗ್ರ್ಯಾಂಡ್ ಅಯತೊಲ್ಲಾ ನಾಸರ್ ಮಕರೆಮ್ ಶಿರಾಜಿ ವಿಶ್ವದಾದ್ಯಂತ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಮಕರೆಮ್ ಫತ್ವಾದಲ್ಲಿ, 'ನಾಯಕ ಅಥವಾ ಮಾರ್ಜಾವನ್ನು ಬೆದರಿಸುವ ಯಾವುದೇ ವ್ಯಕ್ತಿ ಅಥವಾ ಆಡಳಿತವನ್ನು 'ಯುದ್ಧನಾಯಕ' ಅಥವಾ 'ಮೊಹರೆಬ್' ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಮೊಹರೆಬ್ ಎಂದರೆ ಅಲ್ಲಾಹನ ವಿರುದ್ಧ ಯುದ್ಧ ಮಾಡುವ ವ್ಯಕ್ತಿ. ಇರಾನಿನ ಕಾನೂನಿನಡಿಯಲ್ಲಿ ಮೊಹರೆಬ್ ಎಂದು ಗುರುತಿಸಲ್ಪಟ್ಟ ಜನರು ಮರಣದಂಡನೆ, ಶಿಲುಬೆಗೇರಿಸುವಿಕೆ, ಅಂಗಚ್ಛೇದನ ಅಥವಾ ಗಡೀಪಾರಿಗೆ ಗುರಿಯಾಗುತ್ತಾರೆ.
ಜೂನ್ 13ರಂದು ಪ್ರಾರಂಭವಾದ 12 ದಿನಗಳ ಯುದ್ಧಕ್ಕೆ ಕದನ ವಿರಾಮ ನಂತರ ಧಾರ್ಮಿಕ ಫತ್ವಾ ಹೊರಡಿಸಲಾಗಿದೆ. ಜೂನ್ 13ರಂದು ಇಸ್ರೇಲ್ ಇರಾನ್‌ನಲ್ಲಿ ಬಾಂಬ್ ದಾಳಿಯನ್ನು ಪ್ರಾರಂಭಿಸಿತು. ಇದರಲ್ಲಿ ಅದರ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಉನ್ನತ ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳು ಹತ್ಯೆಯಾದರು. ಇದಕ್ಕೆ ಪ್ರತಿಯಾಗಿ ಟೆಹ್ರಾನ್ ಇಸ್ರೇಲ್ ನಗರಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿತು. ಇಸ್ಲಾಮಿಕ್ ಗಣರಾಜ್ಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವುದು ತನ್ನ ಗುರಿಯಾಗಿದೆ ಎಂದು ಇಸ್ರೇಲ್ ಹೇಳಿದೆ. ಈ ಹೇಳಿಕೆಯನ್ನು ಟೆಹ್ರಾನ್ ಪದೇ ಪದೇ ನಿರಾಕರಿಸಿದೆ.
ಇರಾನ್‌ನ ಮೂರು ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡಲು ಅಮೆರಿಕ ಕೂಡ ಯುದ್ಧಕ್ಕೆ ಧುಮುಕಿತು. ಇದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದರ ನಂತರ, ಇರಾನ್ ಕತಾರ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಯ ಮೇಲೆ ಬಾಂಬ್ ದಾಳಿ ಮಾಡಿತು. ಪ್ರಸ್ತುತ ಯುದ್ಧ ಸ್ಥಗಿತಗೊಂಡಿದ್ದು ಕದನ ವಿರಾಮ ಜಾರಿಯಲ್ಲಿದೆ.
Advertisement