
ಲಾಹೋರ್: ಹರಸಾಹಸ ಪಟ್ಟು ತನ್ನ ದೇಶದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಒಂದರ ಮೆಲೊಂದು ತಲೆನೋವು ಆರಂಭವಾಗುತ್ತಿದ್ದು, ಇದೀಗ ಪಾಕಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಉಗ್ರರು ದಾಳಿ ಮಾಡುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಪಂದ್ಯದ ವೇಳೆ ರಚಿನ್ ರವೀಂದ್ರ ಅವರತ್ತ ಉಗ್ರ ಸಂಘಟನೆ ಬೆಂಬಲಿಗನೋರ್ವ ನುಗ್ಗಿದ್ದ ಘಟನೆ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಬಳಿಕ ಉಗ್ರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉಗ್ರರು ನೇರವಾಗಿ ಬಾಂಬ್ ಸ್ಫೋಟವನ್ನೇ ನಡೆಸಿದ್ದರು. ಪಾಕಿಸ್ತಾನದ ಪೇಶಾವರ ಸಮೀಪದ ಖೈಬರ್ ಪಖ್ತುಂಖ್ವಾದಲ್ಲಿರುವ ಮಸೀದಿಯ ಹೊರಗೆ ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 5 ಮಂದಿ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದರು.
ಈ ಘಟನೆ ಹಸಿರಾಗಿರುವಂತೆಯೇ ಪಾಕಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ. ಈ ಬಾರಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನದ ಮಿಲಿಟರಿ ಕಾಂಪೌಂಡ್‌ಗೆ ಎರಡು ಸ್ಫೋಟಕ ತುಂಬಿದ ಕಾರುಗಳು ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ಈ ಬಾರಿ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾಕ್ ಮಿಲಿಟರಿ ಕ್ಯಾಂಪ್ ಬಳಿಯೇ ಘಟನೆ!
ಮಂಗಳವಾರ ಸಂಜೆ ಸೇನಾ ಕಾಂಪೌಂಡ್‌ಗೆ ಎರಡು ಸ್ಫೋಟಕ ತುಂಬಿದ ಕಾರುಗಳನ್ನು ನುಗ್ಗಿಸಿದ ಉಗ್ರರು ಪಾಕ್ ಮಿಲಿಟರಿ ಮೇಲೆ ಆತ್ಮಾಹುತಿ ದಾಳಿಗೆ ಪ್ರಯತ್ನಿಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ ಆರು ಪಾಕಿಸ್ತಾನಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಇಲ್ಲಿಯವರೆಗೆ ಎರಡೂ ದಾಳಿಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಆರು ನಾಗರಿಕರು ಸಾವನ್ನಪ್ಪಿದ್ದಾರೆ" ಎಂದು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೇನಾ ಕ್ಯಾಂಪ್ ಪ್ರವೇಶಕ್ಕೆ ಉಗ್ರರ ಯತ್ನ
ಆತ್ಮಾಹುತಿ ಬಾಂಬರ್‌ಗಳು ಬನ್ನು ಕಂಟೋನ್ಮೆಂಟ್‌ನ ಪ್ರವೇಶ ದ್ವಾರಕ್ಕೆ ಎರಡು ಸ್ಫೋಟಕ ತುಂಬಿದ ವಾಹನಗಳನ್ನು ಡಿಕ್ಕಿ ಹೊಡೆಸಿ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದಾಗಿ ಭಾರಿ ಸ್ಫೋಟಗಳು ಸಂಭವಿಸಿದ್ದು, ನಂತರ ಹಲವಾರು ಉಗ್ರರು ಕಾಂಪೌಂಡ್‌ಗೆ ನುಗ್ಗಲು ಪ್ರಯತ್ನಿಸಿದರು.
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಭದ್ರತಾ ಪಡೆಗಳು ಅವರೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿದವು. ಆರಂಭಿಕ ವರದಿಗಳು ನಾಲ್ಕು ಉಗ್ರರನ್ನು ಕೊಂದಿವೆ ಎಂದು ದೃಢಪಡಿಸುತ್ತವೆ. ಗುಂಡಿನ ಚಕಮಕಿ ಇನ್ನೂ ಮುಂದುವರೆದಿದ್ದು, ಉಳಿದ ದಾಳಿಕೋರರನ್ನು ಭದ್ರತಾ ಪಡೆಗಳು ಬೆನ್ನಟ್ಟುತ್ತಿವೆ ಎಂದು ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಹಾಗೆ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಒಂದು ಜಿಲ್ಲೆಯಾದ ಬನ್ನು, ದೇಶದ ಹಿಂದೆ ಸ್ವ-ಆಡಳಿತ ಬುಡಕಟ್ಟು ಪ್ರದೇಶಗಳ ಪಕ್ಕದಲ್ಲಿದೆ ಮತ್ತು ಇದು ಅಫ್ಘಾನಿಸ್ತಾನಕ್ಕೆ ಹತ್ತಿರದಲ್ಲಿದೆ. 2001 ರಿಂದ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಅಫ್ಘಾನ್ ತಾಲಿಬಾನ್ ಅನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದ ಹಫೀಜ್ ಗುಲ್ ಬಹದ್ದೂರ್ ಸಶಸ್ತ್ರ ಗುಂಪು ಈ ದಾಳಿಯ ಹೊಣೆ ಹೊತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಉಗ್ರಗಾಮಿ ಗುಂಪು, "ನಮ್ಮ ಹೋರಾಟಗಾರರು ಪ್ರಮುಖ ಗುರಿಯನ್ನು ತಲುಪಿದರು ಮತ್ತು ನಿಯಂತ್ರಣವನ್ನು ಪಡೆದರು" ಎಂದು ಹೇಳಿಕೆಯಲ್ಲಿ ತಿಳಿಸಿದೆ.
Advertisement