
ಕುಲಭೂಷಣ್ ಜಾಧವ್ ಅವರನ್ನು ಇರಾನ್‌ನಿಂದ ಅಪಹರಿಸಲು ಪಾಕಿಸ್ತಾನಿ ಗುಪ್ತಚರ ಸಂಸ್ಥೆ (ಐಎಸ್‌ಐ)ಗೆ ಸಹಾಯ ಮಾಡಿದ್ದ ಮುಫ್ತಿ ಶಾ ಮಿರ್ ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಹಳ ಹತ್ತಿರದಿಂದ ನಿಗೂಢ ವ್ಯಕ್ತಿಗಳು ಹಲವಾರು ಬಾರಿ ಮಿರ್ ಮೇಲೆ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶಾ ಮಿರ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಶಾ ಮಿರ್ ಬಲೂಚಿಸ್ತಾನದ ಪ್ರಮುಖ ವಿದ್ವಾಂಸನಾಗಿದ್ದನು. ಈ ಹಿಂದೆಯೂ ಆತನ ಮೇಲೆ ಎರಡು ಕೊಲೆ ಯತ್ನಗಳು ನಡೆದಿದ್ದವು. ಶುಕ್ರವಾರ ರಾತ್ರಿ ಪ್ರಾರ್ಥನೆ ಮುಗಿಸಿ ಟರ್ಬತ್‌ನಲ್ಲಿರುವ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಾಗ ಮೋಟಾರ್ ಸೈಕಲ್‌ಗಳಲ್ಲಿ ಬಂದೂಕುಧಾರಿಗಳು ಅವರ ಮೇಲೆ ಹೊಂಚು ಹಾಕಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾ ಮಿರ್ ಮೂಲಭೂತವಾದಿ ಪಕ್ಷವಾದ ಜಮಿಯತ್ ಉಲೇಮಾ-ಇ-ಇಸ್ಲಾಂ (ಜೆಯುಐ) ಸದಸ್ಯರಾಗಿದ್ದನು. ಅವನು ಮುಫ್ತಿ ಎಂಬ ಸೋಗಿನಲ್ಲಿ ಶಸ್ತ್ರಾಸ್ತ್ರ ಮತ್ತು ಮಾನವ ಕಳ್ಳಸಾಗಣೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾರತ ವಿರೋಧಿ ಯೋಜನೆಗಳನ್ನು ರೂಪಿಸಲಾಗುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳಿಗೆ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದ ಎಂದು ವರದಿಯಾಗಿವೆ. ಕಳೆದ ವಾರ, ಬಲೂಚಿಸ್ತಾನದ ಖುಜ್ದಾರ್ ನಗರದಲ್ಲಿ ಮಿರ್ ಪಕ್ಷದ ಇತರ ಇಬ್ಬರು ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಕೊಲೆಗಳ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕುಲಭೂಷಣ್ ಜಾಧವ್ ಪ್ರಕರಣ
ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಅವಧಿಪೂರ್ವ ನಿವೃತ್ತಿ ಪಡೆದು ಇರಾನ್‌ನ ಚಬಹಾರ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರು. 2016ರಲ್ಲಿ ಅವರನ್ನು ಇರಾನ್-ಪಾಕಿಸ್ತಾನ ಗಡಿಯ ಬಳಿ ಅಪಹರಿಸಲಾಗಿತ್ತು. ಐಎಸ್ಐ ಈ ಕಾರ್ಯಾಚರಣೆಯನ್ನು ನಡೆಸಿತ್ತು. ಮುಫ್ತಿ ಶಾ ಮಿರ್ ಕೂಡ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ಈ ಕೆಲಸದಲ್ಲಿ ಸಹಾಯ ಮಾಡಿದ್ದನು. ಇದಾದ ನಂತರ, ಜಾಧವ್ ಅವರನ್ನು ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಯಿತು. ಅಂದಿನಿಂದಲೂ ಕುಲಭೂಷಣ್ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. 2017ರಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಭಾರತದ ಮೇಲ್ಮನವಿಯ ನಂತರ, ಅಂತರರಾಷ್ಟ್ರೀಯ ನ್ಯಾಯಾಲಯವು 2019ರಲ್ಲಿ ಅವರ ಮರಣದಂಡನೆಗೆ ತಡೆ ನೀಡಿತ್ತು.
Advertisement