
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಅಕ್ರಮ ಹಗರಣಗಳ ಕುರಿತು ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ (Lalit Modi) ವಿಚಾರಣೆಯಿಂದ ತಪ್ಪಿಸಿಕೊಂಡರು ಎನ್ನುವಾಗಲೇ ಮತ್ತೊಂದು ಆಘಾತ ಎದುರಾಗಿದೆ.
ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದರು.
ಮೂಲಗಳ ಪ್ರಕಾರ ಲಲಿತ್ ಮೋದಿ, ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರವಾದ ವನವಾಟುವಿನ ಪೌರತ್ವವನ್ನು ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಮೋದಿ, ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟುವಿನ (Vanuatu) ಪೌರತ್ವವನ್ನು ಪಡೆದಿದ್ದಾರೆ ಎನ್ನಲಾಗಿತ್ತು. ಇದೀಗ ಅದೇ ವನವಾಟು ಸರ್ಕಾರ ಲಲಿತ್ ಮೋದಿಗೆ ಆಘಾತ ನೀಡಿದೆ.
ವನವಾಟು ಪಾಸ್ ಪೋರ್ಟ್ ರದ್ದು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದ್ದು, ವನವಾಟು ಸರ್ಕಾರ ಅವರಿಗೆ ನೀಡಲಾದ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲು ನಿರ್ಧರಿಸಿದೆ, ಲಲಿತ್ ಮೋದಿ ಗಡಿಪಾರು ತಪ್ಪಿಸಿಕೊಳ್ಳುವ ಪ್ರಯತ್ನಗಳು ದಕ್ಷಿಣ ಪೆಸಿಫಿಕ್ ಮಹಾಸಾಗರದ ರಾಷ್ಟ್ರದಲ್ಲಿ ಪೌರತ್ವ ಪಡೆಯಲು ಕಾನೂನುಬದ್ಧ ಕಾರಣವಲ್ಲ ಎಂದು ಅಲ್ಲಿನ ಸರ್ಕಾರ ಅಭಿಪ್ರಾಯಪಟ್ಟಿದೆ. ಹೀಗಾಗಿ ಲಲಿತ್ ಮೋದಿ ಪಾಸ್ ಪೋರ್ಟ್ ರದ್ದುಗೊಳಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಭಾರತವು ಈ ಶತಕೋಟ್ಯಾಧಿಪತಿ ಲಲಿತ್ ಮೋದಿಯನ್ನು ಹುಡುಕುತ್ತಿದೆ. ಇದಕ್ಕೂ ಮೊದಲು, ಲಲಿತ್ ಮೋದಿ ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಶರಣಾಗುವಂತೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ವನವಾಟು ಪ್ರಧಾನಿ ಜೋಥಮ್ ನಪತ್ ಅವರು ದೇಶದ ಪೌರತ್ವ ಆಯೋಗದಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ.
ಬಳಿಕ ಅವರು ಲಲಿತ್ ಮೋದಿಗೆ ನೀಡಲಾದ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ಆಯೋಗಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ. "ಅವರ ಅರ್ಜಿಯ ಸಮಯದಲ್ಲಿ ನಡೆಸಲಾದ ಇಂಟರ್‌ಪೋಲ್ ಸ್ಕ್ರೀನಿಂಗ್‌ಗಳು ಸೇರಿದಂತೆ ಎಲ್ಲಾ ಪ್ರಮಾಣಿತ ಹಿನ್ನೆಲೆ ಪರಿಶೀಲನೆಗಳು ಯಾವುದೇ ಕ್ರಿಮಿನಲ್ ಶಿಕ್ಷೆಯನ್ನು ತೋರಿಸದಿದ್ದರೂ, ಕಳೆದ 24 ಗಂಟೆಗಳಲ್ಲಿ ಇಂಟರ್‌ಪೋಲ್ ಲಲಿತ್ ಮೋದಿಯವರ ವಿರುದ್ಧ ಎಚ್ಚರಿಕೆಯ ನೋಟಿಸ್ ಹೊರಡಿಸಬೇಕೆಂಬ ಭಾರತೀಯ ಅಧಿಕಾರಿಗಳ ವಿನಂತಿಗಳನ್ನು ಎರಡು ಬಾರಿ ತಿರಸ್ಕರಿಸಿದೆ ಎಂದು ನನಗೆ ತಿಳಿದುಬಂದಿದೆ, ಏಕೆಂದರೆ ಸಾಕಷ್ಟು ನ್ಯಾಯಾಂಗ ಪುರಾವೆಗಳಿಲ್ಲ. ಅಂತಹ ಯಾವುದೇ ಎಚ್ಚರಿಕೆಯು ಲಲಿತ್ ಮೋದಿಯವರ ಪೌರತ್ವ ಅರ್ಜಿಯನ್ನು ಸ್ವಯಂಚಾಲಿತವಾಗಿ ತಿರಸ್ಕರಿಸಲು ಕಾರಣವಾಗುತ್ತಿತ್ತು" ಎಂದು ಪ್ರಧಾನಿ ನಪತ್ ಹೇಳಿದ್ದಾರೆ ಎನ್ನಲಾಗಿದೆ.
ವನವಾಟು ಪಾಸ್ ಪೋರ್ಟ್ ಗೌರವ, ಹಕ್ಕಲ್ಲ
ಇದೇ ವೇಳೆ ತಮ್ಮ ದೇಶದ ಪಾಸ್ ಪೋರ್ಟ್ ನಾವು ವ್ಯಕ್ತಿಗಳಿಗೆ ನೀಡುವ ಗೌರವವೇ ಹೊರತು ಹಕ್ಕಲ್ಲ.. ಅರ್ಜಿದಾರರು ಕಾನೂನುಬದ್ಧ ಕಾರಣಗಳಿಗಾಗಿ ಪೌರತ್ವವನ್ನು ಪಡೆಯಬೇಕು ಎಂದು ಅವರು ಒತ್ತಿ ಹೇಳಿದರು.
ವನವಾಟು ಏಕೆ?
ಲಲಿತ್ ಮೋದಿ ವನವಾಟು ದೇಶವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಭಾರತೀಯ ಕಾನೂನಿನಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲ, ಬಹುಶಃ ವನವಾಟುವಿನ "ಗೋಲ್ಡನ್ ಪಾಸ್‌ಪೋರ್ಟ್" ಕೂಡ ಕಾರಣವಿರಬಹುದು ಎನ್ನಲಾಗುತ್ತಿದೆ. ವನವಾಟು ದೇಶವು "ಗೋಲ್ಡನ್ ಪಾಸ್‌ಪೋರ್ಟ್" ಎಂಬ ಯೋಜನೆಯನ್ನು ಹೊಂದಿದ್ದು, ಇದರಲ್ಲಿ ಶ್ರೀಮಂತರು ಹಣ ಕೊಟ್ಟು ಪೌರತ್ವವನ್ನು ಪಡೆಯಬಹುದು.ವನವಾಟುವಿನಲ್ಲಿ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ. ಅಂದರೆ ನೀವು ಎಲ್ಲಿಯೇ ಸಂಪಾದಿಸಿದರೂ ವನವಾಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಇದೇ ಕಾರಣಕ್ಕೆ ಲಲಿತ್ ಮೋದಿ ವನವಾಟು ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಳ್ಳ ಹಿಡಿಯುತ್ತಾ ಐಪಿಎಲ್ ಹಗರಣದ ವಿಚಾರಣೆ?
ಇನ್ನು ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರೂಪಾಯಿಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ, ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸುವಾಗ ಲಲಿತ್ ಮೋದಿ ಅವರ ಮೇಲೆ ಬಿಡ್ಡಿಂಗ್ ಅಕ್ರಮಗಳು ಮತ್ತು ಹಣ ವರ್ಗಾವಣೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿತ್ತು. ಲಲಿತ್ ಮೋದಿ ಅವರು ಮುಂಬೈನಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿಚಾರಣೆಯಲ್ಲಿ ಒಮ್ಮೆ ಮಾತ್ರ ಹಾಜರಾಗಿದ್ದರು. ಮೇ 2010ರಲ್ಲಿ, ಅವರು ದೇಶದಿಂದ ಪಲಾಯನ ಮಾಡಿ ಬ್ರಿಟನ್ ಗೆ ಪರಾರಿಯಾಗಿದ್ದರು.
2009ರಲ್ಲಿ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಬೇಕಾಯಿತು. 2010 ರ ಐಪಿಎಲ್ ಫೈನಲ್ ನಂತರ, ಪುಣೆ ಮತ್ತು ಕೊಚ್ಚಿ ಎಂಬ ಎರಡು ಹೊಸ ಫ್ರಾಂಚೈಸಿಗಳ ಬಿಡ್ಡಿಂಗ್‌ನಲ್ಲಿ ದುರುಪಯೋಗ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಲಲಿತ್ ಮೋದಿಯನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಯಿತು. ಲಲಿತ್ ಮೋದಿ ಅವರ ಮೇಲೆ ಆರ್ಥಿಕ ದುರುಪಯೋಗ ಮತ್ತು ಕಚೇರಿಯಿಂದ ಅನಧಿಕೃತ ಹಣ ವರ್ಗಾವಣೆ ಆರೋಪವಿದೆ.
Advertisement