ಬಂತುನವದೆಹಲಿ: ಭಾರತದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಜಿ ಚೇರ್ಮನ್ ಲಲಿತ್ ಮೋದಿ 14 ವರ್ಷಗಳ ಬಳಿಕ ಕರಾಳ ಇತಿಹಾಸವನ್ನು ಬಯಲು ಮಾಡಿದ್ದು, ಮ್ಯಾಚ್ ಫಿಕ್ಸಿಂಗ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ಹೌದು.. ನಾನಾ ವಿವಾದಗಳಿಂದ ಭಾರತದಿಂದ ಪಲಾಯನ ಮಾಡಿದ್ದ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನದ ಕರಾಳ ಇತಿಹಾಸವನ್ನು ಬಿಚ್ಚಿಟ್ಟಿದ್ದು, ತಾವು ಭಾರತ ಬಿಟ್ಟು ಪರಾರಿಯಾಗಲು ಕಾರಣವಾದ ಅಂಶಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ ಶಮಾನಿಯ ‘Figuring Out’ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ಸುದೀರ್ಘವಾಗಿ ಮಾತನಾಡಿರುವ ಲಲಿತ್ ಮೋದಿ, 'ನಾನು 2010ರಲ್ಲಿ ಭಾರತ ತೊರೆದಿದ್ದು ಕಾನೂನು ಸಮಸ್ಯೆಗಳಿಂದಲ್ಲ.. ಬದಲಿಗೆ ಭೂಗತ ದೊರೆ ದಾವೂದ್ ಇಬ್ರಾಹಿಂ ಜೀವ ಬೆದರಿಕೆ ಹಾಕಿದ ಕಾರಣಕ್ಕೇ ನಾನು ದೇಶ ಬಿಡಬೇಕಾಯಿತು ಎಂದಿದ್ದಾರೆ.
ದಾವೂದ್ ಇಬ್ರಾಹಿಂ ಬೆದರಿಕೆ
'ನನಗೆ ಜೀವ ಬೆದರಿಕೆ ಬಂದಿದ್ದಕ್ಕೇ ನಾನು ದೇಶ ತೊರೆದೆ. ಆರಂಭದಲ್ಲಿ ಯಾವುದೇ ಕಾನೂನು ಸಮಸ್ಯೆಗಳು ನನಗೆ ದೇಶ ತೊರೆಯುವಂಥ ಪರಿಸ್ಥಿತಿ ಸೃಷ್ಟಿಸಲಿಲ್ಲ. ಆದರೆ, ದಾವೂದ್ ಇಬ್ರಾಹಿಂನಿಂದ ನನಗೆ ಜೀವ ಬೆದರಿಕೆ ಕರೆಗಳು ಬಂತು. ದಾವೂದ್ ಇಬ್ರಾಹಿಂ ನನ್ನ ಬೆನ್ನು ಬಿದ್ದಿದ್ದ. ನಾನು ಮ್ಯಾಚ್ ಫಿಕ್ಸಿಂಗ್ ಮಾಡಬೇಕೆಂದು ಆತ ಬಯಸುತ್ತಿದ್ದ. ಆದರೆ, ನಾನು ಮ್ಯಾಚ್ ಫಿಕ್ಸಿಂಗ್ ಗೆ ಸಿದ್ಧನಿರಲಿಲ್ಲ. ನನಗೆ ಭ್ರಷ್ಟಾಚಾರ ವಿರೋಧಿ ಅಭಿಯಾನ ತುಂಬಾ ಮುಖ್ಯವಾಗಿತ್ತು ಹಾಗೂ ಪಂದ್ಯದ ಸಮಗ್ರತೆ ನನಗೆ ಬಹಳ ಮುಖ್ಯವಾಗಿತ್ತು.
ವಿಮಾನ ನಿಲ್ದಾಣದಲ್ಲಿ ಸುರಕ್ಷತೆಗಾಗಿ ವಿಐಪಿ ನಿರ್ಗಮನವನ್ನು ಬಳಸುವಂತೆ ನನ್ನ ಅಂಗರಕ್ಷಕ ನನ್ನನ್ನು ಒತ್ತಾಯಿಸಿದ. ನಾನು ಹಿಟ್ ಲಿಸ್ಟ್ ನಲ್ಲಿದ್ದೇನೆ ಹಾಗೂ ನನಗೆ ಕೇವಲ 12 ಗಂಟೆಗಳ ಕಾಲ ಮಾತ್ರ ಭದ್ರತೆಯ ಭರವಸೆ ನೀಡಲು ಸಾಧ್ಯ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ ನಂತರ, ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತು. ಪೊಲೀಸ್ ಉಪ ಆಯುಕ್ತ ಹಿಮಾಂಶು ರಾಯ್ ನನಗಾಗಿ ವಿಮಾನ ನಿಲ್ದಾಣದ ಬಳಿ ಕಾಯುತ್ತಿದ್ದರು. ನಾವಿನ್ನು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ.
ನಿಮ್ಮ ಜೀವಕ್ಕೆ ಅಪಾಯವಿದೆ. ನಾವು ಮುಂದಿನ 12 ಗಂಟೆಗಳ ಕಾಲ ಮಾತ್ರ ನಿಮಗೆ ಸುರಕ್ಷತೆಯ ಖಾತರಿ ನೀಡಬಲ್ಲೆವು ಎಂದು ಹೇಳಿದರು. ನಂತರ, ಅಲ್ಲಿಂದ ನನ್ನನ್ನು ಬೆಂಗಾವಲಿನೊಂದಿಗೆ ಮಂಬೈನಲ್ಲಿನ ಫೋರ್ ಸೀಸನ್ಸ್ ಹೋಟೆಲ್ ಗೆ ಕರೆದೊಯ್ಯಲಾಯಿತು ಎಂದು ಲಲಿತ್ ಮೋದಿ ಹೇಳಿದ್ದಾರೆ.
ಕೊಚ್ಚಿ ಟೀಮ್ ನಲ್ಲಿ ಸುನಂದಾ ಪುಷ್ಕರ್ ಪಾಲು: ಸೋನಿಯಾ ಗಾಂಧಿ ಕಚೇರಿ ಪ್ರಭಾವ
ಇನ್ನು ಇದೇ ವೇಳೆ ಕೊಚ್ಚಿ ಫ್ರಾಂಚೈಸಿ ಕುರಿತು ಮಾತನಾಡಿರುವ ಲಲಿತ್ ಮೋದಿ ಕಾಂಗ್ರೆಸ್ ಸಂಸದ ಶಶಿತರೂರ್ ಮತ್ತು ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ವಿಚಾರವಾಗಿಯೂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೊಚ್ಚಿ ತಂಡದ ವಿಚಾರವಾಗಿ ಸುನಂದಾ ಶೂನ್ಯ ಬಂಡವಾಳದ ಹೊರತಾಗಿಯೂ ಶೇ.25% ರಷ್ಟು ಲಾಭಾಂಶ ಪಾಲು ಹೊಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆ ದೆಹಲಿಯ 10 ಜನಪಥ್ ಶಕ್ತಿಕೇಂದ್ರ (ಆ ದಿನಗಳಲ್ಲಿ ಸೋನಿಯಾ ಗಾಂಧಿ ಅವರ ನಿವಾಸ)ದಿಂದ ಕರೆಗಳು ಬರುತ್ತಿತ್ತು.
ಅಲ್ಲದೆ ಇಡಿ ದಾಳಿ, ಆದಾಯ ತೆರಿಗೆ ಕ್ರಮ ಮತ್ತು ಜೈಲು ಬೆದರಿಕೆಗಳು ಬರುತ್ತಿದ್ದವು. ಆಗಿನ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಲಲಿತ್ ಮೋದಿಗೆ ಕರೆ ಮಾಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿಕೊಂಡರು. ಒಂದು ವೇಳೆ ಸಹಿ ಹಾಕದಿದ್ದರೆ ನನ್ನ ಸ್ಥಾನದಿಂದ ನನ್ನನು ತೆಗೆದುಹಾಕುವುದಾಗಿ ಹೇಳಿದ್ದರು ಎಂದು ಲಲಿತ್ ಮೋದಿ ಹೇಳಿದ್ದಾರೆ.
ಅಂತೆಯೇ ಸುನಂದಾ ಪುಷ್ಕರ್ ಅವರ ಹತ್ಯೆಯ ಸುದ್ದಿ ಸಾರ್ವಜನಿಕವಾಗಿ ಪ್ರಕಟವಾದ ಕೂಡಲೇ ಶಶಿ ತರೂರ್ ಅವರನ್ನು ಭೇಟಿ ಮಾಡಿದ ಮೊದಲ ರಾಜಕಾರಣಿ ಸೋನಿಯಾ ಗಾಂಧಿ. ತರೂರ್ ಅವರೊಂದಿಗೆ ದನಿಗೂಡಿಸುವುದಕ್ಕಿಂತ ಹೆಚ್ಚಾಗಿ, ಇದು ತನಿಖಾ ಸಂಸ್ಥೆಗಳಿಗೆ ಒಂದು ಸಂದೇಶವಾಗಿತ್ತು, ಏಕೆಂದರೆ ಅವರು ಶಶಿ ತರೂರ್ ಸೋನಿಯಾ ಗಾಂಧಿ ಅವರ ಬೆಂಬಲವನ್ನು ಹೊಂದಿದ್ದರು.. ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇದೇ ವೇಳೆ, ನಾನು ಯಾವಾಗ ಬೇಕಾದರೂ ಭಾರತಕ್ಕೆ ಮರಳಬಹುದು ಎಂದು ಲಲಿತ್ ಮೋದಿ ಸಂದರ್ಶನದಲ್ಲಿ ಹೇಳಿಕೊಂಡಿದ್ದು, ಐಪಿಎಲ್ ಕ್ರೀಡಾಕೂಟದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಬೆನ್ನಿಗೇ, 2010ರಲ್ಲಿ ಲಲಿತ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಇದಾದ ನಂತರ, ಅವರು ಒಮ್ಮೆಯೂ ಭಾರತಕ್ಕೆ ಭೇಟಿ ನೀಡಿಲ್ಲ.
Advertisement