
ಲಾಹೋರ್: ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ತಾನವನ್ನು ಸ್ವತಂತ್ರ್ಯಗೊಳಿಸಬೇಕು ಎಂದು ಹೋರಾಡುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ತನ್ನ ಮಜೀದ್ ಬ್ರಿಗೇಡ್ ಮೂಲಕ ಪಾಕಿಸ್ತಾನದ ಪ್ಯಾಸೆಂಜರ್ ರೈಲನ್ನೇ ಹೈಜಾಕ್ ಮಾಡಿದೆ.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಕ್ವಾದ ಪೇಶಾವರ್‌ಗೆ ತೆರಳುತ್ತಿದ್ದ ಪಾಕಿಸ್ತಾನ ರೈಲ್ವೇ ಇಲಾಖೆಗೆ ಸೇರಿದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಬಲೂಚಿಸ್ತಾನ ಬಂಡುಕೋರರು ಅಪಹರಿಸಿದ್ದಾರೆ.
ಈ ರೈಲಿನ ಸುಮಾರು 9 ಬೋಗಿಗಳಲ್ಲಿದ್ದ 400ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು, ರೈಲ್ವೇ ಹಳಿಗಳನ್ನು ಸ್ಫೋಟಿಸಿ ಬಿಎಲ್ಎ ಬಂಡುಕೋರರು ರೈಲನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರ ತಿಳಿಯುತ್ತಲೇ ಪಾಕಿಸ್ತಾನ ಸೇನೆ ಮತ್ತು ಚೀನಾ ಸೇನೆ ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು ಈ ವರೆಗೂ 150 ಒತ್ತೆಯಾಳುಗಳ ರಕ್ಷಣೆ ಮಾಡಿದೆ. ಅಂತೆಯೇ ಪಾಕಿಸ್ತಾನ ಸೇನಾ ಕಾರ್ಯಾಚರಣೆಯಲ್ಲಿ ಬಲೂಚ್ ಲಿಬರೇಷನ್ ಆರ್ಮಿಯ ಸುಮಾರು 27 ಬಂಡುಕೋರರನ್ನು ಹೊಡೆದುರುಳಿಸಲಾಗಿದೆ.
ಮಜೀದ್ ಬ್ರಿಗೇಡ್ ಎಚ್ಚರಿಕೆ
ಏತನ್ಮಧ್ಯೆ ಹಾಲಿ ಅಹಪರಣ ಕುರಿತು ಮಾತನಾಡಿರುವ ಬಿಎಲ್ಎದ ಮಜೀದ್ ಬ್ರಿಗೇಡ್, ಬದುಕುವ ಆಸೆ ಇದ್ದರೆ ಬಲೂಚಿಸ್ತಾನದಿಂದ ಹಿಂದೆ ಸರಿಯಿರಿ ಎಂದು ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಎಚ್ಚರಿಕೆ ನೀಡಿದೆ. 'ನಮ್ಮ ಬಿಎಲ್ಎ ಸೈನಿಕರ ಮೇಲೆ ದಾಳಿ ಮಾಡಿದರೆ ಇಡೀ ರೈಲನ್ನು ಸ್ಫೋಟಿಸುತ್ತೇವೆ. ಅಲ್ಲದೆ ರೈಲಿನಲ್ಲಿರುವವರನ್ನು ಗುಂಡಿಕ್ಕಿ ಕೊಂದು ಹಾಕುತ್ತೇವೆ' ಪಾಕಿಸ್ತಾನಿ ವಾಯುಪಡೆಗೆ ಎಚ್ಚರಿಕೆ ನೀಡಿದ್ದಾರೆ.
ಅಪಾಯಕಾರಿ Majeed Brigade
ಅಂದಹಾಗೆ ಈ ಮಜೀದ್ ಬ್ರಿಗೇಡ್ ಬಿಎಲ್ಎಯ ಆತ್ಮಹತ್ಯಾ ದಾಳಿ ಘಟಕವಾಗಿದ್ದು, ಈಗಾಗಲೇ ಪಾಕಿಸ್ತಾನದಾದ್ಯಂತ ಈ ಘಟಕ ಹಲವು ಆತ್ಮಹತ್ಯಾ ದಾಳಿಗಳನ್ನು ನಡೆಸಿದೆ. ಮಾತ್ರವಲ್ಲದೇ ಇದೇ ಮಜೀದ್ ಘಟಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ. ಈ ಮಜೀದ್ ಬ್ರಿಗೇಡ್‌ನ ಫೈಟರ್‌ಗಳು ವಿಮಾನ ವಿರೋಧಿ ಬಂದೂಕುಗಳನ್ನು ಹೊಂದಿದ್ದು, ಇಂತಹ ವ್ಯವಸ್ಥೆ ಹೊಂದಿರುವ ಜಗತ್ತಿನ ಕೆಲವೇ ಕೆಲವು ಬಂಡುಕೋರ ಸಂಸ್ಥೆಗಳಲ್ಲಿ ಮಜೀದ್ ಬ್ರಿಗೇಡ್ ಮತ್ತು ಬಿಎಲ್ ಎ ಪ್ರಮುಖವಾಗಿವೆ.
ಪ್ಯಾಸೆಂಜರ್ ರೈಲು ಅಪಹರಣದ ಬಳಿಕ ಪಾಕ್ ಸೇನೆ ರೈಲಿನ ಮೇಲೆ ನಿಗಾ ಇಡಲು ತನ್ನ ಡ್ರೋಣ್ ಕಳುಹಿಸಿತ್ತು. ಆದರೆ ರೈಲಿನೊಳಗಿದ್ದ ಈ ಮಜೀದ್ ಬ್ರಿಗೇಡ್ ಬಂಡುಕೋರರು ತಮ್ಮ ಬಳಿ ಇದ್ದ ವಿಮಾನ ವಿರೋಧಿ ಬಂದೂಕುಗಳನ್ನು ಉಪಯೋಗಿಸಿ ಆ ಡ್ರೋಣ್ ಅನ್ನು ಕೂಡ ಹೊಡೆದುರುಳಿಸಿದ್ದಾರೆ. ಮಜೀದ್ ಬ್ರಿಗೇಡ್‌ನ ಎಲ್ಲಾ ಹೋರಾಟಗಾರರು ಆತ್ಮಹತ್ಯಾ ಬಾಂಬರ್‌ಗಳಾಗಿದ್ದು, ಆತ್ಮಾಹುತಿ ದಾಳಿ ನಡೆಸುವ ಮೂಲಕ ಇಡೀ ರೈಲನ್ನು ಸೆಕೆಂಡ್‌ನಲ್ಲಿ ಸ್ಫೋಟಿಸಬಲ್ಲರು. ಇದು ಪಾಕಿಸ್ತಾನ ಸೇನೆಗೆ ದೊಡ್ಡ ತಲೆನೋವಿಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಅದು ಚೀನಾ ನೆರವು ಪಡೆಯುತ್ತಿದೆ ಎನ್ನಲಾಗಿದೆ.
ಮಜೀದ್ ಬ್ರಿಗೇಡ್ ಇತಿಹಾಸ
ಈ ಮಜೀದ್ ಬ್ರಿಗೇಡ್ ಅನ್ನು 2011ರಲ್ಲಿ ಅಧಿಕೃತವಾಗಿ ರಚಿಸಲಾಯಿತು. ವಾಸ್ತವವಾಗಿ, 1974 ರಲ್ಲಿ, ಅಬ್ದುಲ್ ಮಜೀದ್ ಬಲೋಚ್ ಎಂಬ ವ್ಯಕ್ತಿ ಪಾಕಿಸ್ತಾನದ ಆಗಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದರು. ಅಬ್ದುಲ್ ಮಜೀದ್ ಅವರ ಹೆಸರಿನಲ್ಲಿ ಈ ಸಂಸ್ಥೆಗೆ ಮಜೀದ್ ಬ್ರಿಗೇಡ್ ಎಂದು ಹೆಸರಿಸಲಾಗಿದೆ. ಮಜೀದ್ ಬ್ರಿಗೇಡ್ ಮೊದಲಿನಿಂದಲೂ ಗೆರಿಲ್ಲಾ ಯುದ್ಧ ನಡೆಸುತ್ತಿತ್ತು. ನಂತರ ಅದು ಪಾಕಿಸ್ತಾನದ ಮಿಲಿಟರಿ ಬೆಂಗಾವಲು ಪಡೆಗಳು ಮತ್ತು ಗುರಿಗಳ ಮೇಲೆ ಹಿಟ್ ಮತ್ತು ರನ್ ತಂತ್ರಗಳನ್ನು ಅಳವಡಿಸಿಕೊಂಡಿತು ಮತ್ತು ಈಗ ಮಜೀದ್ ಬ್ರಿಗೇಡ್ ಆತ್ಮಹತ್ಯಾ ದಾಳಿಗಳನ್ನು ನಡೆಸಲು ಹೆಸರುವಾಸಿಯಾಗಿದೆ.
2007 ರಲ್ಲಿ ಪಾಕಿಸ್ತಾನವು BLA ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿತ್ತು. ಬಳಿಕ ಅದರ ಅಂಗ ಸಂಸ್ಛೆಯಾದ ಈ ಮಜೀದ್ ಬ್ರಿಗೇಡ್ ಅನ್ನು ಕೂಡ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಿ ಪ್ರತ್ಯೇಕ ದೇಶವನ್ನು ರಚಿಸುವುದು ಮಜೀದ್ ಬ್ರಿಗೇಡ್‌ನ ಗುರಿಯಾಗಿದೆ.
ಹಲವಾರು ದಾಳಿ
2018ರಲ್ಲಿ ಸಿಪಿಇಸಿಯಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ಎಂಜಿನಿಯರ್‌ಗಳ ಬಸ್ ಮೇಲೆ ಇದೇ ಮಜೀದ್ ಬ್ರಿಗೇಡ್ ದಾಳಿ ನಡೆಸಿತ್ತು. ಮಜೀದ್ ಬ್ರಿಗೇಡ್ 2020ರಲ್ಲಿ ಪಾಕಿಸ್ತಾನ ಸ್ಟಾಕ್ ಎಕ್ಸ್‌ಚೇಂಜ್, 2024 ರಲ್ಲಿ ಪಿಎನ್‌ಎಸ್ ಸಿದ್ದಿಕ್ ಮತ್ತು ಕ್ವೆಟ್ಟಾ ರೈಲ್ವೆ ನಿಲ್ದಾಣದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿತ್ತು. ಇದೀಗ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಅಪಹರಣ ಮಾಡುವ ಮೂಲಕ ಜಾಗತಿಕವಾಗಿ ಸುದ್ದಿಗೆ ಗ್ರಾಸವಾಗಿದೆ.
Advertisement