
ಕರಾಚಿ: ಜಗತ್ತಿನಾದ್ಯಂತ ಅಡಗಿರುವ ಭಾರತ ವಿರೋಧಿ ಉಗ್ರಗಾಮಿಗಳ ಬೇಟೆ ಮುಂದುವರೆದಿದ್ದು, ಇದೀಗ ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಹಫೀಜ್ ಸಯೀದ್‌ನ ಸಂಬಂಧಿ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಫೈನಾನ್ಸರ್, ಖಾರಿ ಅಬ್ದು ರೆಹಮಾನ್ (Qari Abdu Rehman) 'ಅಪರಿಚಿತ ಬಂದೂಕುಧಾರಿಗಳು' ಹತ್ಯೆಗೈದಿದ್ದಾರೆ.
ಹೌದು.. ಪಾಕಿಸ್ತಾನದ ಕರಾಚಿಯಲ್ಲಿ ತಮ್ಮ ಅಂಗಡಿಯಲ್ಲಿದ್ದಾಗ ಉಗ್ರ ಖಾರಿ ಅಬ್ದು ರೆಹಮಾನ್ (Qari Abdu Rehman)ನನ್ನು 'ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈತನನ್ನು ಯಾರು ಕೊಂದರು..? ಏಕೆ ಕೊಂದರು? ಎಂಬುದು ಈವರೆಗೂ ತಿಳಿದಿಲ್ಲ.
ಖೈದಾಬಾದ್ ಪೊಲೀಸ್ ಎಸ್‌ಎಚ್‌ಒ ರಾಣಾ ಖುಷಿ ಮೊಹಮ್ಮದ್ ನೀಡಿರುವ ಮಾಹಿತಿಯಂತೆ ಮೋಟಾರ್ ಸೈಕಲ್‌ನಲ್ಲಿ ಬಂದ ಶಸ್ತ್ರಸಜ್ಜಿತ ಶಂಕಿತರು ಖಾರಿ ಅಬ್ದು ರೆಹಮಾನ್ ಇದ್ದ ಅಂಗಡಿಗೇ ಬಂದು ಆತನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತದ ಮಡುವಿನಲ್ಲಿದ್ದ ಶಂಕಿತ ಉಗ್ರ ಖಾರಿ ಅಬ್ದು ರೆಹಮಾನ್ ನನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾನೆ.
ದಾಳಿ ವಿಡಿಯೋ ವೈರಲ್!
ಕರಾಚಿಯ ಶೆರ್ಪಾವೊ ಕಾಲೋನಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬೈಕ್ ನಲ್ಲಿ ಬಂದ ಬಂದೂಕುಧಾರಿಗಳು ಖಾರಿ ರೆಹಮಾನನ್ನು ಕೊಂದು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಆಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟಾರ್ಗೆಟ್ ಕಿಲ್ಲಿಂಗ್
ಇನ್ನು ಖಾರಿ ಅಬ್ದು ರೆಹಮಾನ್ ಹತ್ಯೆಯನ್ನು ಟಾರ್ಗೆಟ್ ಕಿಲ್ಲಿಂಗ್ ನ ಮುಂದುವರೆದ ಭಾಗ ಎಂದು ಪಾಕಿಸ್ತಾನ ಅಧಿಕಾರಿಗಳು ಕರೆದಿದ್ದು, ಈ ಹತ್ಯೆಯನ್ನು "ಭಯೋತ್ಪಾದನಾ ಕೃತ್ಯ" ಎಂದು ಟೀಕಿಸಿದ್ದಾರೆ.
ಯಾರು ಈ ಖಾರಿ ಅಬ್ದು ರೆಹಮಾನ್?
ಖಾರಿ ಅಬ್ದು ರೆಹಮಾನ್ ಭಾರತದ ಮೋಸ್ಟ್ ವಾಟೆಂಡ್ ಲಷ್ಕರ್ ನಾಯಕ ಮತ್ತು ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ನ ಸಂಬಂಧಿಯಾಗಿದ್ದು, ಈತ ಕೂಡ ಲಷ್ಕರ್ ಇ ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದ. ಈತ ಕರಾಚಿಯಲ್ಲಿ ಕಾನೂನುಬಾಹಿರ ಧಾರ್ಮಿಕ ರಾಜಕೀಯ ಸಂಘಟನೆಯಾದ ಅಹ್ಲೆ ಸುನ್ನತ್ ವಾಲ್ಜಮಾತ್ (ASWJ) ನ ಸ್ಥಳೀಯ ನಾಯಕನಾಗಿದ್ದ. ಪ್ರಸ್ತುತ ಆತನ ಕೊಲೆಯ ಹಿಂದೆ ವೈಯುಕ್ತಿಕ ದ್ವೇಷ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Advertisement