
ಬೀಜಿಂಗ್: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ, ಚೀನಾದಿಂದ ದೊಡ್ಡ ಪ್ರತಿಕ್ರಿಯೆ ಕಂಡುಬಂದಿದೆ. ಚೀನಾದ ಅತಿದೊಡ್ಡ ಮಿಲಿಟರಿ ಸರಕು ವಿಮಾನವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂಬ ವರದಿಗಳನ್ನು ಚೀನಾ ಸೇನೆ ನಿರಾಕರಿಸಿದೆ. ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಚೀನಾ ಸೇನೆ ಎಚ್ಚರಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಪಿಎಲ್ಎಎಫ್) ತನ್ನ ಕ್ಸಿಯಾನ್ ವೈ -20 ಮಿಲಿಟರಿ ಸಾರಿಗೆ ವಿಮಾನವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂಬುದನ್ನು ನಿರಾಕರಿಸಿದೆ.
ಪಾಕಿಸ್ತಾನಕ್ಕೆ Y-20 ಶಸ್ತ್ರಾಸ್ತ್ರಗಳ ಪೂರೈಕೆ" ಕುರಿತು ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿಗಳು ಹರಿದಾಡಿದ ಬೆನ್ನಲ್ಲೇ ಅಂತಹ ವರದಿಗಳು ಸುಳ್ಳು ಎಂದು ವಾಯುಪಡೆ ಹೇಳಿಕೆ ನೀಡಿದೆ ಎಂದು ಚೀನಾದ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಸೋಮವಾರ ಪ್ರಕಟವಾದ ವರದಿ ತಿಳಿಸಿದೆ. ತಪ್ಪು ಮಾಹಿತಿಗೆ ಸಂಬಂಧಿಸಿದ ಹಲವಾರು ಫೋಟೋಗಳು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಸಹ ಪಿಎಲ್‌ಎಎಫ್ ಪೋಸ್ಟ್ ಮಾಡಿದೆ. ಪ್ರತಿ ಸ್ಕ್ರೀನ್‌ಶಾಟ್ ಅನ್ನು ಕೆಂಪು ಬಣ್ಣದಲ್ಲಿ 'ವದಂತಿ' ಎಂದು ಗುರುತಿಸಲಾಗಿದೆ.
"ಇಂಟರ್ನೆಟ್ ಕಾನೂನಿಗಿಂತ ಮಿಗಿಲಾದದ್ದಲ್ಲ" ಎಂದು ವರದಿ ಹೇಳಿದೆ. ಮಿಲಿಟರಿಗೆ ಸಂಬಂಧಿಸಿದ ವದಂತಿಗಳನ್ನು ಹರಡುವವರನ್ನು ಕಾನೂನುಬದ್ಧವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪಿಎಲ್‌ಎ ಪಾಕಿಸ್ತಾನ ಸೇನೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಪಿಎಲ್‌ಎಯ ಈ ನಿರಾಕರಣೆಯನ್ನು ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಕೇವಲ ಎರಡು ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಂದ ಮಾಡಿಕೊಂಡಿವೆ.
ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI) ಇತ್ತೀಚಿನ ವರದಿಯ ಪ್ರಕಾರ, ಚೀನಾ ಪಾಕಿಸ್ತಾನಕ್ಕೆ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ವರದಿಯ ಪ್ರಕಾರ, 2020 ರಿಂದ 2024 ರವರೆಗಿನ ಪಾಕಿಸ್ತಾನದ ಶಸ್ತ್ರಾಸ್ತ್ರ ಖರೀದಿಯಲ್ಲಿ ಶೇ 81 ರಷ್ಟು ಚೀನಾದಿಂದ ಖರೀದಿಸಲಾಗಿದೆ. ಖರೀದಿಗಳಲ್ಲಿ ಇತ್ತೀಚಿನ ಯುದ್ಧ ವಿಮಾನಗಳು, ರಾಡಾರ್‌ಗಳು, ನೌಕಾ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಕ್ಷಿಪಣಿಗಳು ಸೇರಿವೆ. ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಪ್ರಮುಖ ಅಂಶವಾಗಿರುವ ಜೆ -17 ವಿಮಾನವನ್ನು ಎರಡೂ ದೇಶಗಳು ಜಂಟಿಯಾಗಿ ತಯಾರಿಸುತ್ತವೆ.
Advertisement