Gaza ಮೇಲೆ Israel ದಾಳಿ: 22 ಮಕ್ಕಳು ಸೇರಿ ಕನಿಷ್ಟ 70 ಮಂದಿ ಸಾವು!
ಟೆಲ್ ಅವೀವ್: ಹಮಾಸ್ ಉಗ್ರಗಾಮಿ ಸಂಘಟನೆಯನ್ನು ಶತಾಯ ಗತಾಯ ಸರ್ವನಾಶ ಮಾಡಿಯೇ ತೀರುತ್ತೇವೆ ಎಂದು ಇಸ್ರೇಲ್ ಸೇನೆ ಮುಂದುವರೆಸಿರುವ ದಾಳಿಯಲ್ಲಿ 22 ಮಕ್ಕಳ ಸೇರಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಇಸ್ರೇಲ್ ಸೇನೆ ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಮಹಮದ್ ಸಿನ್ವಾರ್ ನನ್ನು ಹೊಡೆದುರುಳಿಸಿತ್ತು. ಇದೀಗ ತನ್ನ ಕಾರ್ಯಾಚರಣೆ ಮುಂದುವರೆಸಿರುವ ಇಸ್ರೇಲ್ ಸೇನೆ ಇದೀಗ ದಕ್ಷಿಣ ಗಾಜಾ ಮೇಲೂ ದಾಳಿ ನಡೆಸಿದೆ.
ಇಸ್ರೇಲ್ ಸೇನೆ ಬುಧವಾರ ಉತ್ತರ ಮತ್ತು ದಕ್ಷಿಣ ಗಾಜಾದ ಮೇಲೆ ವಾಯುದಾಳಿ ನಡೆಸಿ, ಸುಮಾರು ಎರಡು ಡಜನ್ ಮಕ್ಕಳು ಸೇರಿದಂತೆ ಕನಿಷ್ಠ 70 ಜನರನ್ನು ಕೊಂದಿದ್ದಾರೆ ಎಂದು ಆಸ್ಪತ್ರೆಗಳು ಮತ್ತು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹಮಾಸ್ ಉಗ್ರ ಗಾಮಿ ಸಂಘಟನೆಯನ್ನು ಬುಡಸಹಿತ ನಾಶ ಮಾಡುವವರೆಗೂ ಇಸ್ರೇಲ್ ಸೇನೆ ತನ್ನ ದಾಳಿ ನಿಲ್ಲುಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಒಂದು ದಿನದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಆಸ್ಪತ್ರೆಗಳು ಮತ್ತು ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಉತ್ತರ ಗಾಜಾದ ಜಬಾಲಿಯಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್ ವಾಯುಸೇನೆ ದಾಳಿ ನಡೆಸಿದ್ದು, ಈ ದಾಳಿಗಳಲ್ಲಿ 22 ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಟ್ರಂಪ್ ಸೌದಿ ಭೇಟಿ ಸಮಯದಲ್ಲೇ ಇಸ್ರೇಲ್ ದಾಳಿ
ಇನ್ನು ಅಚ್ಚರಿ ಅಂಶವೆಂದರೆ ಅತ್ತ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಪ್ರವಾಸದಲ್ಲಿರುವಾಗಲೇ ಇಸ್ರೇಲ್ ಸೇನೆಯಿಂದ ಈ ದಾಳಿ ನಡೆದಿದೆ. ಈ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲ್ ಸೇನೆ ನಿರಾಕರಿಸಿದ್ದು, ರಾಕೆಟ್ ಲಾಂಚರ್‌ಗಳು ಸೇರಿದಂತೆ ಪ್ರದೇಶದಲ್ಲಿನ ಉಗ್ರಗಾಮಿ ಮೂಲಸೌಕರ್ಯವನ್ನು ಉಲ್ಲೇಖಿಸಿ ಮಂಗಳವಾರ ತಡರಾತ್ರಿ ಜಬಾಲಿಯಾ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಅದು ಎಚ್ಚರಿಸಿದೆ. ಅಲ್ಲದೆ ಗಾಜಾದಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ಹೆಚ್ಚಿಸುವುದಾಗಿ ಇಸ್ರೇಲ್ ಬೆದರಿಕೆ ಹಾಕಿದೆ.
ಹಮಾಸ್ ನೇತೃತ್ವದ ಉಗ್ರಗಾಮಿಗಳು 2023 ರಲ್ಲಿ ದಕ್ಷಿಣ ಇಸ್ರೇಲ್ ಮೇಲೆ ನಡೆಸಿದ ದಾಳಿ ಬಳಿಕ ಇಸ್ರೇಲ್ ಸೇನೆ ಯುದ್ಧ ಆರಂಭಿಸಿತ್ತು. ಅಂದು ಇಸ್ರೇಲ್ ನ ಸುಮಾರು 1,200 ಜನರನ್ನು ಹಮಾಸ್ ಉಗ್ರರು ಕೊಂದು ಹಾಕಿದ್ದರು. ಬಳಿಕ ಇಸ್ರೇಲ್‌ನ ಪ್ರತೀಕಾರದ ದಾಳಿಯಲ್ಲಿ 52,928 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಅಸು ನೀಗಿದ್ದಾರೆ. ಅವರಲ್ಲಿ ಹಲವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಬಳಿಕ ಮಾರ್ಚ್ 18 ರಂದು ಇಸ್ರೇಲ್ ಕದನ ವಿರಾಮವನ್ನು ಮುರಿದ ನಂತರ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.