
ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ನಾಶವಾಗಿದ್ದ ಉಗ್ರ ತರಬೇತಿ ಕೇಂದ್ರಗಳನ್ನು ಮರು ನಿರ್ಮಾಣ ಮಾಡುವುದಾಗಿ ಪಾಕಿಸ್ತಾನ ಪ್ರತಿಜ್ಞೆ ಮಾಡಿದೆ.
ಭಾರತದ ಸೇನೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಸ್ಥಳಗಳ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು.
ಈ ವೇಳೆ 100ಕ್ಕೂ ಅಧಿಕ ಉಗ್ರರು ಹತರಾಗಿದ್ದರು. ಈ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಸಂಘರ್ಷ ವ್ಯಾಪಕವಾಗಿತ್ತು. ಬಳಿಕ ಉಭಯ ದೇಶಗಳು ಕದನವಿರಾಮಕ್ಕೆ ಒಪ್ಪಿಗೆ ನೀಡಿದ್ದವು.
ನಾಶವಾದ ಉಗ್ರ ತರಬೇತಿ ಕೇಂದ್ರಗಳಿಗೆ ಪಾಕ್ ಸಚಿವರ ಭೇಟಿ
ಏತನ್ಮಧ್ಯೆ ಪಾಕಿಸ್ತಾನದ ಫೆಡರಲ್ ಸಚಿವ ರಾಣಾ ತನ್ವೀರ್ ಹುಸೈನ್ ಬುಧವಾರ ಅಂದರೆ ಮೇ 14ರಂದು ಮುರಿಡ್ಕೆ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಂತ್ರಸ್ಥರನ್ನು ಭೇಟಿ ಮಾಡಿದ್ದ ಅವರು, 'ಪಾಕ್ ಸರ್ಕಾರ ಸ್ವಂತ ಖರ್ಚಿನಲ್ಲಿ ಈ ಪ್ರದೇಶವನ್ನು ಪುನರ್ ನಿರ್ಮಿಸಲು ಪ್ರತಿಜ್ಞೆ ಮಾಡಿದ್ದಾರೆ. ಆ ಮೂಲಕ ಉಗ್ರ ಸಂಘಟನೆಗಳಿಗೆ ಸರ್ಕಾರ ನೆರವು ನೀಡಲಿದೆ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.
ಇದೇ ವಿಚಾರವಾಗಿ 'ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಧ್ವಂಸಗೊಂಡ ಮಸೀದಿ, ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಪಾಕ್ ಪ್ರಧಾನಮಂತ್ರಿ ಶೆಹಬಾಝ್ ಶರೀಫ್ ಮತ್ತು ಸೇನಾ ವರಿಷ್ಠ ಅಸೀಮ್ ಮುನೀರ್ ವೈಯಕ್ತಿಕವಾಗಿಯೂ ಆರ್ಥಿಕ ನೆರವು ನೀಡಲಿದ್ದಾರೆ' ಎಂದು ರಾಣಾ ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಲಾಹೋರ್ ನಿಂದ 33 ಕಿಲೋ ಮೀಟರ್ ದೂರದಲ್ಲಿರುವ ಮುರಿಡ್ಕೆಯ ಐತಿಹಾಸಿಕ ಗ್ರ್ಯಾಂಡ್ ಟ್ರಂಕ್ ರಸ್ತೆ ಸಮೀಪ ಉ*ಗ್ರ ಸಂಘಟನೆಯಾದ ಲಷ್ಕರ್ ಇ ತೊಯ್ಬಾದ ಪ್ರಧಾನ ಕಚೇರಿ ಇದ್ದು, ಇದನ್ನು ಮರ್ಕಝ್ ಇ ತೊಯ್ಬಾ ಎಂದು ಕರೆಯಲಾಗುತ್ತದೆ.
ಮುರಿಡ್ಕೆಯ ಲಷ್ಕರ್ ಕಾಂಪ್ಲೆಕ್ಸ್ ನಲ್ಲಿ ಉಗ್ರರ ತರಬೇತಿ, ನೇಮಕಾತಿ ಸೇರಿದಂತೆ ಭಯೋತ್ಪಾದಕ ದಾಳಿಯ ಸಂಚು ಇಲ್ಲೇ ನಡೆಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ. ಲಷ್ಕರ್ ಪ್ರಧಾನ ಕಚೇರಿ 200ಕ್ಕೂ ಅಧಿಕ ಎಕರೆ ಜಾಗವನ್ನು ಹೊಂದಿದೆ. 1980ರಲ್ಲಿ ಉಗ್ರ ಹಫೀಜ್ ಸಯೀದ್ ಪಾಕಿಸ್ತಾನದ ಐಎಸ್ ಐ ಬೆಂಬಲದೊಂದಿಗೆ ಲಷ್ಕರ್ ಇ ತೊಯ್ಬಾ ಸಂಘಟನೆಯನ್ನು ಹುಟ್ಟುಹಾಕಿದ್ದ ಅಂದಿನಿಂದ ಇದೇ ಜಾಗದಲ್ಲಿ ಉಗ್ರರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
Advertisement