Pahalgam terror attack: ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ; ಭಾರತದ ಪ್ರಚೋದನೆಗೆ ನಮ್ಮ ಕ್ರಮ ಜವಾಬ್ದಾರಿಯುತ- ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಇಸ್ಲಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಕ್ರಮವು ಜವಾಬ್ದಾರಿಯುತವಾಗಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಶನಿವಾರ ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ತಮ್ಮನ್ನು ಭೇಟಿಯಾದ ಟರ್ಕಿಯ ರಾಯಭಾರಿ ಡಾ. ಇರ್ಫಾನ್ ನೆಜಿರೋಗ್ಲು ಅವರೊಂದಿಗೆ ಷರೀಫ್ ಮಾತನಾಡಿದ್ದು, ಈ ವೇಳೆ ಹೇಳಿಕೆ ನೀಡಿದ್ದಾರೆಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಪಹಲ್ಗಾಮ್ ಘಟನೆಯ ನಂತರ ಭಾರತದ ಪ್ರಚೋದನಕಾರಿ ಕ್ರಮಗಳ ಹೊರತಾಗಿಯೂ, ಪಾಕಿಸ್ತಾನದ ಪ್ರತಿಕ್ರಿಯೆ ಜವಾಬ್ದಾರಿಯುತ ಕ್ರಮ ಕೈಗೊಂಡಿದೆ. ಪಾಕಿಸ್ತಾನವು ಯಾವಾಗಲೂ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿದೆ.
ಯಾವುದೇ ದಾಖಲೆಗಳನ್ನು ಹಂಚಿಕೊಳ್ಳದೆ ಪಹಲ್ಗಾಮ್ ದಾಳಿಗೆ ಪಾಕಿಸ್ತಾನದೊಂದಿಗೆ ನಂಟು ಸೃಷ್ಟಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಹಲ್ಗಾಮ್ ಘಟನೆಯ ಹಿಂದಿನ ಸತ್ಯಗಳನ್ನು ಖಚಿತಪಡಿಸಿಕೊಳ್ಳಲು ವಿಶ್ವಾಸಾರ್ಹ, ಪಾರದರ್ಶಕ ಮತ್ತು ತಟಸ್ಥ ಅಂತರರಾಷ್ಟ್ರೀಯ ತನಿಖೆಯನ್ನು ಹೊಂದುವ ಪಾಕಿಸ್ತಾನದ ಪ್ರಸ್ತಾಪಕ್ಕೆ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ.
ಪಾಕಿಸ್ತಾನವು ಅಂತಹ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತದೆ ಮತ್ತು ಟರ್ಕಿಯೆ ಅದರಲ್ಲಿ ಸೇರಿಕೊಂಡರೆ ಸ್ವಾಗತಿಸುತ್ತೇವೆಂದು ಷರೀಫ್ ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಟರ್ಕಿ ನೀಡಿರುವ ಬೆಂಬಲವು ಉಭಯ ದೇಶಗಳ ನಡುವಿನ ಐತಿಹಾಸಿಕ, ಆಳವಾದ ಬೇರೂರಿರುವ ಮತ್ತು ಕಾಲ ಪರೀಕ್ಷಿತ ಸಹೋದರ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ ಎಂದೂ ಹೇಳಿದ್ದಾರೆ.
ಮಾತುಕತೆ ವೇಳೆ ಟರ್ಕಿ ರಾಯಭಾರಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪ್ರಸ್ತುತ ಬಿಕ್ಕಟ್ಟಿನಲ್ಲಿ ಸಂಯಮದಿಂದ ವರ್ತಿಸುವಂತೆ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದು. ಪಾಕಿಸ್ತಾನದ ನಿಲುವನ್ನು ಶ್ಲಾಘಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿಯೂ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್'ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು, ಈ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಘಟನೆ ಬಳಿಕ ಉಭಯ ರಾಷ್ಟ್ರಗಳ ಗಡಿಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.


