
ಸಿಂಗಾಪುರ: ದೀರ್ಘಕಾಲೀನ ಕಾರ್ಯತಂತ್ರದಿಂದಾಗಿ ನೆರೆಯ ದೇಶಕ್ಕಿಂತ ಹೆಚ್ಚಿನ ವೈವಿಧ್ಯತೆಯ ಹೊರತಾಗಿಯೂ ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪಾಕಿಸ್ತಾನಕ್ಕಿಂತ ಮುಂದಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಶನಿವಾರ ಹೇಳಿದ್ದಾರೆ.
ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ಸಂವಾದದಲ್ಲಿ ಮಾತನಾಡಿದ ಸಿಡಿಎಸ್ ಚೌಹಾಣ್, ಎರಡೂ ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಗಳಿಸಿದವು ಮತ್ತು ಆಗ ಪಾಕಿಸ್ತಾನ ಸಾಮಾಜಿಕ, ಆರ್ಥಿಕ ಹಾಗೂ ತಲಾವಾರು ಜಿಡಿಪಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತಕ್ಕಿಂತ ಮುಂದಿತ್ತು. ಆದರೆ ಇಂದು ಭಾರತ ಎಲ್ಲದರಲ್ಲೂ ಅವರಿಗಿಂತ ಮುಂದಿದೆ ಎಂದರು.
"ರಾಜತಾಂತ್ರಿಕವಾಗಿ, 2014 ರಲ್ಲಿ ನಮ್ಮ ಪ್ರಧಾನಿ(ನರೇಂದ್ರ ಮೋದಿ), ನವಾಜ್ ಷರೀಫ್ ಅವರನ್ನು ಆಹ್ವಾನಿಸಿದ್ದರು. ನಾವು ಉತ್ತಮ ದ್ವಿಪಕ್ಷೀಯ ಸಂಬಂಧಕ್ಕಾಗಿ ಯತ್ನಿಸಿದೇವು. ಆದರೆ ಚಪ್ಪಾಳೆ ತಟ್ಟಲು ಎರಡು ಕೈಗಳು ಬೇಕಾಗುತ್ತವೆ. ಪ್ರತಿಯಾಗಿ ನಮಗೆ ಸಿಗುವುದು ಹಗೆತನವಾಗಿದ್ದರೆ, ಈಗ ಸಂಪರ್ಕ ಕಡಿತಗೊಳಿಸುವುದೇ ಒಂದು ಉತ್ತಮ ತಂತ್ರವಾಗಿದೆ" ಎಂದು ಸಿಡಿಎಸ್ ಚೌಹಾಣ್ ಹೇಳಿದ್ದಾರೆ.
ಇದೇ ವೇಳೆ ಭಾರತ-ಪಾಕಿಸ್ತಾನ ಸಂಬಂಧದ ಕುರಿತು ಮಾತನಾಡಿದ ಸಿಡಿಎಸ್, "ಈಗ, ನಾವು ಯಾವುದೇ ಕಾರ್ಯತಂತ್ರವಿಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ" ಎಂದು ಹೇಳಿದರು.
ದಶಕಗಳಲ್ಲಿ ಭಾರತದ ಅಭಿವೃದ್ಧಿ ಆಕಸ್ಮಿಕವಲ್ಲ, ಬದಲಾಗಿ ಎಚ್ಚರಿಕೆಯ ದೀರ್ಘಕಾಲೀನ ಯೋಜನೆಯ ಪರಿಣಾಮವಾಗಿದೆ ಎಂದು ಎಂದು ಜನರಲ್ ಚೌಹಾಣ್ ಹೇಳಿದರು.
Advertisement