

ಕಾಬುಲ್: ಆಫ್ಘಾನಿಸ್ತಾನದಲ್ಲಿ ಸೋಮವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು ಕನಿಷ್ಠ 7 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಮುಂಜಾನೆ ಉತ್ತರ ಅಫ್ಘಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹತ್ತಾರು ಕಟ್ಟಡಗಳು ನೆಲಕ್ಕುರುಳಿವೆ.
ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿ ಸುಮಾರು 150 ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆಯು 6.3 ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಖುಲ್ಮ್‌ನಿಂದ ಪಶ್ಚಿಮ-ನೈಋತ್ಯಕ್ಕೆ 22 ಕಿ.ಮೀ ದೂರದಲ್ಲಿದೆ ಮತ್ತು 28 ಕಿ.ಮೀ ಆಳದಲ್ಲಿದೆ ಎಂದು ಅಮೆರಿಕ ಭೂಕಂಪ ಮಾಪನ ಕೇಂದ್ರ (ಯುಎಸ್‌ಜಿಎಸ್)ದ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯರಾತ್ರಿ 12.59ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಗಾಯಾಳುಗಳನ್ನು ಆರೋಗ್ಯ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ ಎಂದು ಮಜಾರ್-ಎ ಶರೀಫ್ ಬಳಿಯ ಪರ್ವತ ಉತ್ತರ ಪ್ರಾಂತ್ಯದ ಸಮಂಗನ್‌ನಲ್ಲಿರುವ ಆರೋಗ್ಯ ಇಲಾಖೆಯ ವಕ್ತಾರ ಸಮೀಮ್ ಜೋಯಂಡಾ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಕಳೆದ ವಾರವಷ್ಟೇ, ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಆಗಸ್ಟ್ 31 ರಂದು ಪಾಕಿಸ್ತಾನ ಗಡಿಯ ಬಳಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಭೂಕಂಪವು 2,200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು.
Advertisement