

ಕರಾಚಿ: ಪಾಕಿಸ್ತಾನದಲ್ಲಿ 'ಅಪರಿಚಿತ'ರ ದಾಳಿ ಮುಂದುವರೆದಿದ್ದು, ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ) ನಾಯಕ ಮತ್ತು ಖ್ಯಾತ ಧಾರ್ಮಿಕ ವಿದ್ವಾಂಸ ಮೌಲಾನಾ ಹಫೀಜ್ ಅಬ್ದುಲ್ ಸಲಾಂ ಆರಿಫ್ ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದ್ದು, ಪಾಕಿಸ್ತಾನ ಚರ್ಸಡ್ಡಾದ ಮಂದಾನಿ ತಹಸಿಲ್‌ನಲ್ಲಿ ನಡೆದ ಅಪರಿಚತ ಗುಂಡಿನ ದಾಳಿಯಲ್ಲಿ ಮೌಲಾನಾ ಹಫೀಜ್ ಅಬ್ದುಲ್ ಸಲಾಂ ಆರಿಫ್ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ಉದ್ದೇಶಿತ ಹತ್ಯೆ ಘಟನೆಯಲ್ಲಿ, ಗುರುತಿಸಲಾಗದ ದಾಳಿಕೋರರು ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ) ನಾಯಕ ಮತ್ತು ಖ್ಯಾತ ಧಾರ್ಮಿಕ ವಿದ್ವಾಂಸ ಮೌಲಾನಾ ಹಫೀಜ್ ಅಬ್ದುಲ್ ಸಲಾಂ ಆರಿಫ್ ಅವರನ್ನು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಡಾನ್ ಮೂಲಗಳು ತಿಳಿಸಿವೆ.
ಮಂದಾನಿ ಪೊಲೀಸ್ ಠಾಣೆ ವ್ಯಾಪ್ತಿಯ ತಖ್ತ್‌ಭಾಯ್ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚತರು ಮೌಲಾನಾ ಅಬ್ದುಲ್ ಸಲಾಂ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ವೇಳೆ ಅವರು ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಾಲಾಬಾದ್‌ನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಎಸ್ಐ ಕೈವಾಡ
ಇನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ), ಹಿರಿಯ ಧರ್ಮಗುರು ಹಫೀಜ್ ಅಬ್ದುಲ್ ಸಲಾಂ ಆರಿಫ್ ಅವರ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಉರುಳಿಸಲು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್ಕೆಪಿ) ಉಗ್ರಗಾಮಿಗಳು ಈ ಹತ್ಯೆಯನ್ನು ಮಾಡಿದ್ದಾರೆ ಎಂದು ನಂಬಲಾಗಿದೆ.
ಪಾಕ್ ಸರ್ಕಾರ ಮತ್ತು ಐಎಸ್ಐ ವಿರುದ್ಧ ಮಾತನಾಡುತ್ತಿದ್ದ ಧರ್ಮಗುರು
ದೇವಬಂದಿ ಸಮುದಾಯದಲ್ಲಿ ಆರಿಫ್ ಅವರನ್ನು ಪ್ರಭಾವಿ ಧಾರ್ಮಿಕ ವಿದ್ವಾಂಸ ಎಂದು ಪರಿಗಣಿಸಲಾಗಿತ್ತು. ಮೌಲಾನಾ ಫಜಲ್-ಉರ್-ರೆಹಮಾನ್ ನೇತೃತ್ವದ ಜಮಿಯತ್ ಉಲೇಮಾ-ಎ-ಇಸ್ಲಾಂ ಪಾಕಿಸ್ತಾನದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ.
ಈ ಪಕ್ಷವು ಸೆನೆಟ್‌ನಲ್ಲಿ ನಾಲ್ಕನೇ ಅತಿದೊಡ್ಡ ಪ್ರಾತಿನಿಧ್ಯವನ್ನು ಮತ್ತು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಐದನೇ ಅತಿದೊಡ್ಡ ಬಣವನ್ನು ಹೊಂದಿದೆ. ಫಜಲ್-ಉರ್-ರೆಹಮಾನ್ ಬಹಳ ಹಿಂದಿನಿಂದಲೂ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐನ ನೀತಿಗಳ, ವಿಶೇಷವಾಗಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.
ಮೂಲಗಳ ಪ್ರಕಾರ, ಐಸಿಸ್‌ನ ಅಫ್ಘಾನಿಸ್ತಾನ ಮೂಲದ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಈ ದಾಳಿಯ ಹಿಂದಿದೆ ಎಂದು ಆರಂಭಿಕ ತನಿಖೆಗಳಿಂದ ಪತ್ತೆಯಾಗಿದೆ ಎಂದು ಹೇಳಲಾಗಿಗೆ. ಈ ಸಂಘಟನೆಯು ಸಲಾಫಿ-ಇಖ್ವಾನಿ ಸಿದ್ಧಾಂತಕ್ಕೆ ಬದ್ಧವಾಗಿದೆ.
ಇದು ಅಫ್ಘಾನ್ ತಾಲಿಬಾನ್‌ನ ದಿಯೋಬಂದಿ ಸಿದ್ಧಾಂತಕ್ಕೆ ಸೈದ್ಧಾಂತಿಕವಾಗಿ ವಿರುದ್ಧವಾಗಿದೆ. ಎರಡೂ ಸಿದ್ಧಾಂತಗಳು ಇಸ್ಲಾಂನ ಸುನ್ನಿ ಶಾಖೆಗೆ ಸೇರಿದ್ದರೂ, ಧಾರ್ಮಿಕ ಮತ್ತು ರಾಜಕೀಯ ಪ್ರಾಬಲ್ಯದ ಬಗ್ಗೆ ಅವು ಬಹಳ ಹಿಂದಿನಿಂದಲೂ ಘರ್ಷಣೆ ನಡೆಸುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
Advertisement