

ಮಾಸ್ಕೋ: ರಷ್ಯಾದಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಆಗಸದಲ್ಲಿ ಹಾರುತ್ತಿದ್ದಾಗಲೇ ಹೆಲಿಕಾಪ್ಟರ್ 2 ತುಂಡಾಗಿ ಪತನವಾಗಿದೆ.
ರಷ್ಯಾದ ಡಾಗೆಸ್ತಾನ್ ಗಣರಾಜ್ಯದ ಅಚಿ-ಸು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರಷ್ಯಾದ ರಕ್ಷಣಾ ಸಂಬಂಧಿತ ವಾಯುಯಾನ Ka-226 ಹೆಲಿಕಾಪ್ಟರ್(Helicopter)ಪತನಗೊಂಡು ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಈ ಘಟನೆ ರಷ್ಯಾದ ಮಿಲಿಟರಿ ವಿಮಾನಗಳಲ್ಲಿ ಬಳಸುವ ವ್ಯವಸ್ಥೆಗಳ ಪ್ರಮುಖ ಪೂರೈಕೆದಾರ ಕಿಜ್ಲ್ಯಾರ್ ಎಲೆಕ್ಟ್ರೋಮೆಕಾನಿಕಲ್ ಪ್ಲಾಂಟ್ (KEMZ) ಈ ವಿಮಾನವನ್ನು ನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮುದ್ರ ತೀರದ ಕಲ್ಲಿಗೆ ಅಪ್ಪಳಿಸಿ ಇಬ್ಬಾಗವಾದ ಚಾಪರ್
ಮೂಲಗಳ ಪ್ರಕಾರ ಹೆಲಿಕಾಪ್ಟರ್ ಕಿಜ್ಲ್ಯಾರ್ ನಿಂದ ಇಜ್ಬರ್‌ಬಾಶ್‌ಗೆ ಹಾರುತ್ತಿದ್ದಾಗ ಹಾರಾಟದ ಮಧ್ಯದಲ್ಲಿ ಬೆಂಕಿ ಕಾಣಿಸಿಕೊಂಡು ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದೆ. ಪೈಲಟ್, ಕ್ಯಾಸ್ಪಿಯನ್ ಸಮುದ್ರದ ಉದ್ದಕ್ಕೂ ಹತ್ತಿರದ ಕಡಲತೀರದಲ್ಲಿ ವಿಮಾನವನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ನ ಬಾಲ ನೆಲಕ್ಕೆ ಬಡಿದು ತುಂಡಾಯಿತು.
ಬಳಿಕ ಪೈಲಟ್ ಅಲ್ಲಿಯೇ ಚಾಪರ್ ಅನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆಯಾದರೂ ಅದು ಸಾಧ್ಯವಾಗದೇ ಅದು ಕರಬುಡಖ್ಕೆಂಟ್ ಜಿಲ್ಲೆಯ ಖಾಸಗಿ ಮನೆಯ ಅಂಗಳಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಚಾಪರ್ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಕೆಇಎಂಝಡ್‌ನ ಉಪ ಪ್ರಧಾನ ನಿರ್ದೇಶಕರು, ಮುಖ್ಯ ಎಂಜಿನಿಯರ್, ಮುಖ್ಯ ವಿನ್ಯಾಸಕರು ಮತ್ತು ಹಾರಾಟ ಮೆಕ್ಯಾನಿಕ್ ಸೇರಿದ್ದಾರೆ. ಒಟ್ಟು 5 ಜನರು ಮೃತಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ದೃಶ್ಯಗಳಲ್ಲಿ ಹೆಲಿಕಾಪ್ಟರ್ ನೆಲಕ್ಕೆ ಉರುಳುವ ಮೊದಲು ಅದರ ಹಿಂದಿನ ಭಾಗ (ಬಾಲ) ಮುರಿದು ಹೋಗಿರುವುದನ್ನು ಕಾಣಬಹುದು.
'ಮೂವರು ಪ್ರಯಾಣಿಕರು ಮತ್ತು ಪೈಲಟ್ ಅವರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಆದರೆ, ಅವರ ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದರು' ಎಂದು ಡಾಗೆಸ್ತಾನ್‌ನ ಆರೋಗ್ಯ ಸಚಿವ ಯಾರೋಸ್ಲಾವ್ ಗ್ಲಾಜೊವ್ ದೃಢಪಡಿಸಿದರು. ಇತರ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಅಪಘಾತದ ಬಳಿಕ, ಬೆಂಕಿ ಸುಮಾರು 80 ಚದರ ಮೀಟರ್ ಪ್ರದೇಶಕ್ಕೆ ಹರಡಿತು. ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದರು. ರಷ್ಯಾದ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿವೆ.
Advertisement