

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರ ಮಾಡುವಂತೆ ಅಲ್ಲಿನ ಸರ್ಕಾರ ಭಾರತಕ್ಕೆ ಮಾಡಿರುವ ಒತ್ತಾಯವನ್ನು ಹಸೀನಾ ಅವರ ಪುತ್ರ ಕಟುವಾಗಿ ಟೀಕಿಸಿದ್ದಾರೆ. ತಮ್ಮ ತಾಯಿಯ ವಿರುದ್ಧದ ಕಾನೂನು ಕ್ರಮಗಳನ್ನು ತಳ್ಳಿಹಾಕಿರುವ ಅವರು, ಗಡಿಯಾಚೆಯಿಂದ ಹೆಚ್ಚುತ್ತಿರುವ ಭಯೋತ್ಪಾದನಾ ಬೆದರಿಕೆಯ ಬಗ್ಗೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ANI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್ , ತನ್ನ ತಾಯಿಯನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ವಿಮಾನದಲ್ಲಿ ಕರೆದೊಯ್ಯಿದಾಗಿನಿಂದ, ಉಗ್ರಗಾಮಿಗಳು ಅವರನ್ನು ಹತ್ಯೆ ಮಾಡಲು ಯೋಜಿಸುತ್ತಿದ್ದಾರೆ. ಅವರಿಗೆ ಆಶ್ರಯ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಕೃತಜ್ಞತೆಗಳು ಎಂದಿದ್ದಾರೆ.
ತಮ್ಮ ತಾಯಿಯ ವಿರುದ್ಧದ ಪ್ರಕರಣಗಳಲ್ಲಿ ನ್ಯಾಯಾಂಗ ಮಾನದಂಡಗಳನ್ನು ಉಲ್ಲಂಘಿಸಿದೆ. ಬಾಂಗ್ಲಾದೇಶದ ಹಸ್ತಾಂತರ ಕೋರಿಕೆಯ ನ್ಯಾಯಸಮ್ಮತತೆಯನ್ನು ನಾನು ಪ್ರಶ್ನಿಸುತ್ತೇನೆ ಎಂದಿದ್ದಾರೆ.
ವಿಚಾರಣೆಗೆ ಮುನ್ನವೇ ಅವರು 17 ನ್ಯಾಯಾಧೀಶರನ್ನು ವಜಾಗೊಳಿಸಿದರು. ಸಂಸತ್ತಿನ ಅನುಮೋದನೆಯಿಲ್ಲದೆ ಕಾನೂನುಬಾಹಿರವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡಿದರು. ಅವರ ರಕ್ಷಣಾ ವಕೀಲರನ್ನು ನ್ಯಾಯಾಲಯದ ವಿಚಾರಣೆಯಿಂದ ನಿರ್ಬಂಧಿಸಿದರು ಎಂದು ಆರೋಪಿಸಿದ ಸಜೀಬ್, ಯಾವುದೇ ಸೂಕ್ತ ಪ್ರಕ್ರಿಯೆ ಇಲ್ಲದಿದ್ದಾಗ, ಯಾವುದೇ ದೇಶವು ಹಸ್ತಾಂತರಿಸುವುದಿಲ್ಲ ಎಂದರು.
ಢಾಕಾದಲ್ಲಿ ಸರಿಯಾದ ಕಾನೂನು ಕಾರ್ಯವಿಧಾನಗಳು ಇಲ್ಲದಿರುವಾಗ ಭಾರತೀಯ ಅಧಿಕಾರಿಗಳು ಬಾಂಗ್ಲಾ ಮನವಿಯನ್ನು ತಿರಸ್ಕರಿಸುತ್ತದೆ ಎಂಬ ವಿಶ್ವಾಸವಿದೆ ಎಂದರು. ಪದಚ್ಯುತ ಪ್ರಧಾನಿ ಬಾಂಗ್ಲಾದೇಶದಲ್ಲಿ ತಮ್ಮ 15 ವರ್ಷಗಳ ಅಧಿಕಾರಾವಧಿಗೆ ಸಂಬಂಧಿಸಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೆ ಮಧ್ಯಂತರ ಸರ್ಕಾರವು ನ್ಯಾಯಾಂಗ ಪ್ರಕ್ರಿಯೆಯನ್ನು ಮೂಲಭೂತವಾಗಿ ರಾಜಿ ಮಾಡಿಕೊಂಡಿದೆ. ತಮ್ಮ ತಾಯಿಯ ನಾಟಕೀಯ ನಿರ್ಗಮನದ ಸಂದರ್ಭಗಳನ್ನು ವಿವರಿಸಿದ ಸಜೀಬ್ ವಾಝೆದ್ ಭಾರತದಿಂದಾಗಿ ನನ್ನ ತಾಯಿಯ ಜೀವ ಉಳಿಯಿತು ಎಂದರು.
ಭಾರತವು ಮೂಲಭೂತವಾಗಿ ನನ್ನ ತಾಯಿಯ ಜೀವವನ್ನು ಉಳಿಸಿದೆ. ಅವರು ಬಾಂಗ್ಲಾದೇಶವನ್ನು ಬಿಟ್ಟು ಹೋಗದಿದ್ದರೆ, ಉಗ್ರಗಾಮಿಗಳು ಅವರನ್ನು ಕೊಲ್ಲಲು ಯೋಜಿಸಿದ್ದರು ಎಂದು ಹೇಳಿದರು. ಜುಲೈ 2024 ರಲ್ಲಿ ತಮ್ಮ ಸರ್ಕಾರವು ಆರಂಭಿಕ ಪ್ರತಿಭಟನೆಗಳನ್ನು ತಪ್ಪಾಗಿ ನಿರ್ವಹಿಸಿದೆ ಎಂದು ಒಪ್ಪಿಕೊಂಡರೂ, ನಂತರದ ಘಟನೆಗಳನ್ನು ಸ್ವಯಂಪ್ರೇರಿತ ಜನಪ್ರಿಯ ದಂಗೆಗಿಂತ ಹೆಚ್ಚಾಗಿ ಸಂಘಟಿತ ರಾಜಕೀಯ ದಂಗೆ ಎಂದರು.
Advertisement