

ವಾಷಿಂಗ್ಟನ್: ಉದ್ಯೋಗಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನೆಸ್ಲೆ ಸಂಸ್ಥೆ ಸಿಇಒ ಲಾರೆಂಟ್ ಫ್ರೀಕ್ಸೆ ವಜಾ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕಚೇರಿಯ ಉದ್ಯೋಗಿ ಜೊತೆ ರೊಮ್ಯಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಸಿಇಒ ಬರೊಬ್ಬರಿ 150 ಕೋಟಿ ರೂ ವೇತನದ ಉದ್ಯೋಗ ಕಳೆದುಕೊಂಡಿದ್ದಾರೆ. ಹೌದು ಅಮೇರಿಕನ್ ಇಂಟರ್ನ್ಯಾಷನಲ್ ಗ್ರೂಪ್ ಇಂಕ್ ಸಿಇಒ ಆಗಬೇಕಿದ್ದ ಜಾನ್ ನೀಲ್ ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಕಳೆದ ವಾರ ಅಮೇರಿಕನ್ ಇಂಟರ್ನ್ಯಾಷನಲ್ ಗ್ರೂಪ್ ಇಂಕ್ ಮಾಹಿತಿ ನೀಡಿದ್ದು, 'ಮುಂಬರುವ ಅಧ್ಯಕ್ಷ ಜಾನ್ ನೀಲ್ ಅವರೊಂದಿಗೆ ಬೇರ್ಪಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಉದ್ಯಮದ ಈ ನಡೆ ವಿಮಾ ಉದ್ಯಮದ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ.
ಉದ್ಯೋಗಕ್ಕೆ ಕುತ್ತಾದ ಕಚೇರಿ ಪ್ರೇಮ ಪುರಾಣ
ಈ ಹಿಂದೆಯೇ ಜಾನ್ ನೀಲ್ ಅವರ ಉದ್ಯೋಗಕ್ಕೆ ಕತ್ತರಿ ಬಿದ್ದಿತ್ತು. ಅವರನ್ನೇಕೆ ಉದ್ಯೋಗದಿಂದ ವಜಾ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಅವರ ಕಚೇರಿಯಲ್ಲಿ ಪ್ರೇಮಪುರಾಣವೇ ಅವರ ಉದ್ಯೋಗ ಕತ್ತರಿಗೆ ಕಾರಣ ಎಂದು ಹೇಳಲಾಗಿದೆ. ತಮ್ಮ ಪ್ರೇಮ ಪ್ರಸಂಗದಿಂದಾಗಿ ಅವರು ಬರೊಬ್ಬರು 150 ರೂ ವೇತನದ ಕೆಲಸ ಕಳೆದುಕೊಂಡಿದ್ದಾರೆ.
ಈ ವರ್ಷದ ಆರಂಭದವರೆಗೂ ನೀಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದೈತ್ಯ ವಿಮಾ ಮಾರುಕಟ್ಟೆಯಾದ ಲಂಡನ್‌ನ ಲಾಯ್ಡ್ಸ್, ಕಳೆದ ತಿಂಗಳಿನಿಂದ ಅವರ ನಡವಳಿಕೆಯನ್ನು ತನಿಖೆ ಮಾಡುತ್ತಿದೆ ಎಂದು ಬುಧವಾರ ಹೇಳಿತ್ತು. ಇದು ಲಾಯ್ಡ್ಸ್ ಉದ್ಯೋಗಿಯೊಂದಿಗೆ ಅವರು ಹೊಂದಿದ್ದ ಸಂಬಂಧದ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಹೇಳಲಾಗಿದೆ.
ಈ ಸಂಬಂಧ ಸಂಸ್ಥೆ ಈಗಾಗಲೇ ಜಾನ್ ನೀಲ್ ರಿಂದ ಸ್ಪಷ್ಟನೆ ಕೇಳಿತ್ತು. ಆದರೆ ಅವರಿಂದ ಸಮಾಧಾನಕರ ಉತ್ತರ ಬಂದಿರಲಿಲ್ಲ. ಇದೇ ವಿಚಾರವಾಗಿ AIG ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿತ್ತು.
150 ಕೋಟಿ ರೂ ವೇತನ
AIG ಯಲ್ಲಿ ಜಾನ್ ನೀಲ್‌ಗಾಗಿ ಸಂಭಾವ್ಯ $17.2 ಮಿಲಿಯನ್ ವೇತನ ಪ್ಯಾಕೇಜ್ ಕಾಯುತ್ತಿತ್ತು. ಅವರು ತಮ್ಮ ಮೊದಲ ವರ್ಷಕ್ಕೆ ಸುಮಾರು $5 ಮಿಲಿಯನ್ ಸಂಬಳ ಮತ್ತು ಬೋನಸ್‌ಗಳನ್ನು ಸಂಗ್ರಹಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ.
ಜೊತೆಗೆ $5 ಮಿಲಿಯನ್ ಗುರಿ ವಾರ್ಷಿಕ ಈಕ್ವಿಟಿ ಪ್ರಶಸ್ತಿ, ಮೂರು ವರ್ಷಗಳ ವೆಸ್ಟಿಂಗ್ ಅವಧಿಯೊಂದಿಗೆ $4.5 ಮಿಲಿಯನ್ ದಿನದ ಮೊದಲ ನಿರ್ಬಂಧಿತ-ಸ್ಟಾಕ್ ಅನುದಾನ ಮತ್ತು $2.7 ಮಿಲಿಯನ್ ನಗದು ಬೋನಸ್ ಅನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕಚೇರಿ ಪ್ರೇಮ ಪುರಾಣ ಇದೇ ಮೊದಲೇನಲ್ಲ
ಅಂದಹಾಗೆ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕಚೇರಿ ಪ್ರೇಮಪುರಾಣ ಇದೇ ಮೊದಲೇನಲ್ಲ.. ಇತ್ತೀಚಿನ ನಿದರ್ಶನಗಳು ಎಂದರೆ ನೆಸ್ಲೆ SA, Kohl's Corp. ಮತ್ತು Astronomer ಸೇರಿದಂತೆ ಕಂಪನಿಗಳಲ್ಲಿ CEO ಗಳು ಕೂಡ ಇದೇ ರೀತಿಯ ಪ್ರಕರಣಗಳಲ್ಲಿ ವಜಾಗೊಂಡಿದ್ದರು.
ಈ ಹಿಂದೆ ಕಳೆದ ಜುಲೈನಲ್ಲಿ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಅಸ್ಟ್ರಾನಮರ್ ಸಂಸ್ಥೆಯ ಸಿಇಒ ಆಂಡಿ ಬೈರನ್ ಕಿಸ್ ಕ್ಯಾಮ್" ನಲ್ಲಿ ಸಿಕ್ಕಿಬಿದ್ದ ನಂತರ ಕೆಲಸ ಕಳೆದುಕೊಂಡಿದ್ದರು. ಅಂತೆಯೇ ನೆಸ್ಲೆ ಸಂಸ್ಥೆಯ ಸಿಇಒ ಲಾರೆಂಟ್ ಫ್ರೀಕ್ಸೆ ಕೂಡ ಇದೇ ರೀತಿ ವಜಾಗೊಂಡಿದ್ದರು.
Advertisement