
ನುಸೇರತ್: ಗಾಜಾದಾದ್ಯಂತ ಇಸ್ರೇಲ್ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 52 ಜನರ ಹತ್ಯೆಯಾಗಿದೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಸಂಸ್ಥೆ ಮತ್ತು ಆಸ್ಪತ್ರೆಗಳು ತಿಳಿಸಿವೆ. ಇದರಲ್ಲಿ ಫ್ರೆಂಚ್ ಚಾರಿಟಿ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್‌ನ ಉದ್ಯೋಗಿಯೊಬ್ಬರು ಸೇರಿದ್ದಾರೆ ಎನ್ನಲಾಗಿದೆ.
ಬೆಳಗ್ಗೆಯಿಂದ ಗಾಜಾ ಪಟ್ಟಿಯ ಮೇಲೆ ನಿರಂತರ ಇಸ್ರೇಲಿ ಬಾಂಬ್ ಸ್ಫೋಟಗಳಿಂದ ಈ ಸಾವು ಆಗಿದ್ದು, ಗಾಜಾ ನಗರದಲ್ಲಿ ಒಂದು ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಲ್ಲಿ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಯೊಂದು ತಿಳಿಸಿದೆ.
ಗಾಜಾ ನಗರದಲ್ಲಿ 10, ಮಧ್ಯ ಗಾಜಾದಲ್ಲಿ 14 ಮತ್ತು ದಕ್ಷಿಣದ ಪ್ರಾಂತ್ಯದಲ್ಲಿ 28 ಮೃತ ದೇಹಗಳನ್ನು ಸ್ವೀಕರಿಸಲಾಗಿದೆ ಎಂದು ಹಲವಾರು ಆಸ್ಪತ್ರೆಗಳು ಸುದ್ದಿಸಂಸ್ಥೆ AFP ಗೆ ದೃಢಪಡಿಸಿವೆ. ಕೆಲವರು ವೈಮಾನಿಕ ದಾಳಿಯಲ್ಲಿ, ಇತರರು ಡ್ರೋನ್ ಬೆಂಕಿ ಮತ್ತು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅದು ವರದಿ ಮಾಡಿದೆ. ಈ ವಿಚಾರವನ್ನು ಪರಿಶೀಲಿಸುತ್ತಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಅಲ್-ಟಿನಾ ಮತ್ತು ಮೊರಾಗ್ ಪ್ರದೇಶಗಳಲ್ಲಿ ಆಹಾರ ವಿತರಣೆಗಾಗಿ ಕಾಯುತ್ತಿದ್ದ ಪ್ಯಾಲೆಸ್ಟೀನಿಯನ್ನರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಗುಂಡೇಟಿನಿಂದ 14 ಮಂದಿ ಸೇರಿದಂತೆ ಸುಮಾರು 30 ಮಂದಿ ಸಾವನ್ನಪ್ಪಿರುವುದಾಗಿ ಖಾನ್ ಯುನಿಸ್‌ನಲ್ಲಿರುವ ನಾಸರ್ ಆಸ್ಪತ್ರೆ ಮಾಹಿತಿ ಹಂಚಿಕೊಂಡಿದೆ.
ಅನೇಕ ಬಾರಿ ನಡೆದ ಗುಂಡಿನ ದಾಳಿಯಿಂದ ಒಂಬತ್ತು ಶವಗಳನ್ನು ಸ್ವೀಕರಿಸಲಾಗಿದೆ ಎಂದು ಡೀರ್ ಎಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ಹೇಳಿದೆ.
ಮೃತರಲ್ಲಿ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್) ಸಿಬ್ಬಂದಿ ಓಮರ್ ಅಲ್-ಹಯೆಕ್ (26) ಸೇರಿದ್ದಾರೆ. "ನಮ್ಮ ಕೆಲವು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಿಳಿದುಬಂದಿರುವುದಾಗಿ ಗಾಜಾದ ಎಂಎಸ್‌ಎಫ್ ವೈದ್ಯಕೀಯ ತಂಡದ ಮುಖ್ಯಸ್ಥ ಕರಿನ್ ಹಸ್ಟರ್ ಹೇಳಿದ್ದಾರೆ.
Advertisement