
ಲಾಹೋರ್: ಪಾಕಿಸ್ತಾನದಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ ನಡೆಸುವಾಗ ಪೊಲೀಸರ ಗುಂಡೇಟಿಗೆ 11 ಮಂದಿ ಬಲಿಯಾಗಿದ್ದಾರೆ.
ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮಗಳ ವಿರುದ್ಧ ಅಮೆರಿಕದ ರಾಯಭಾರಿ ಕಚೇರಿ ಹೊರಗೆ ಪ್ರತಿಭಟನೆ ನಡೆಸಲು ಇಸ್ಲಾಮಾಬಾದ್ ಕಡೆಗೆ ಜಾಥಾ ನಡೆಸಲು ಪ್ರಯತ್ನಿಸಿದ ತಮ್ಮ 11 ಬೆಂಬಲಿಗರನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ತೀವ್ರಗಾಮಿ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (TLP) ಶನಿವಾರ ಹೇಳಿದೆ.
ಆದರೆ ಇಸ್ರೇಲ್ ವಿರೋಧಿ ಪ್ರತಿಭಟನೆ ಕರೆ ನಡುವೆ ಎರಡು ದಿನಗಳ ಹಿಂದೆ ಆರಂಭವಾದ TLP ಜೊತೆಗಿನ ಸಂಘರ್ಷದಲ್ಲಿ 40 ಪೊಲೀಸರು ಗಾಯಗೊಂಡಿದ್ದಾರೆ ಎಂದು ಪಂಜಾಬ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಲಾಹೋರ್‌ನ ಆಜಾದಿ ಚೌಕ್‌ನಲ್ಲಿ ರಾತ್ರಿಯಿಡೀ ಬೀಡುಬಿಟ್ಟಿದ್ದ 10,000 ರಿಂದ 15,000 ಟಿಎಲ್‌ಪಿ ಕಾರ್ಯಕರ್ತರು ಬೆಳಿಗ್ಗೆ ಇಸ್ಲಾಮಾಬಾದ್ ಕಡೆಗೆ ಜಾಥಾವನ್ನು ಪುನರಾರಂಭಿಸಿದಾಗ ಶನಿವಾರ ಹಿಂಸಾತ್ಮಕ ಘರ್ಷಣೆಗಳು ನಡೆದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಲಾಹೋರ್‌ನಿಂದ ದೂರದಲ್ಲಿರುವ ಶಾಹದಾರ ಮತ್ತು ಮುರಿಡ್ಕೆ ಪ್ರದೇಶಗಳ ನಡುವೆ ಪ್ರಮುಖ ಘರ್ಷಣೆಗಳು ನಡೆದಿವೆ. ಇದರಲ್ಲಿ ಡಜನ್ ಗಟ್ಟಲೇ ಪೊಲೀಸರು ಮತ್ತು ಟಿಎಲ್‌ಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ವಿಡಿಯೋವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡು ರಕ್ತಸ್ರಾವವಾಗುತ್ತಿರುವುದನ್ನು ತೋರಿಸಿದೆ. ಮಾರ್ಗದುದ್ದಕ್ಕೂ ಕಂಟೈನರ್‌ಗಳನ್ನು ಇರಿಸಿದ್ದರೂ, TLP ಪ್ರತಿಭಟನಾಕಾರರು ಹಾಗೂ ಪೊಲೀಸರೊಂದಿಗೆ ಘರ್ಷಣೆ, ರಸ್ತೆ ತಡೆಗಳನ್ನು ತೆಗೆದುಹಾಕುವುದು ಕಂಡುಬಂದಿದೆ.
ಮುರಿಡ್ಕೆ ಬಳಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿಎಲ್‌ಪಿ ಮುಖ್ಯಸ್ಥ ಸಾದ್ ರಿಜ್ವಿ, ಪೊಲೀಸರು 11 ಟಿಎಲ್‌ಪಿ ಬೆಂಬಲಿಗರನ್ನು ಹತ್ಯೆಗೈದಿದ್ದು, 20 ಮಂದಿಗೆ ಗಾಯಗಳಾಗಿವೆ ಎಂದು ಹೇಳಿದರು. TLP ಹೇಳಿಕೆ ಬಗ್ಗೆ ಪಂಜಾಬ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement