
ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಪದೇ ಪದೇ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೂಟರ್ನ್ ಹೊಡೆದಿದ್ದು, 'ಪ್ರಶಸ್ತಿಯನ್ನು ನನಗೇ ನೀಡಿ ಎಂದು ನಾನು ಕೇಳಿಲ್ಲ' ಎಂದು ಹೇಳಿದ್ದಾರೆ.
ಈ ವರ್ಷ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲದಿದ್ದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಪ್ರಶಸ್ತಿ ಪುರಸ್ಕೃತ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಹಲವು ಬಾರಿ ನೆರವು ನೀಡಿದ್ದೇನೆ ಎಂದು ಹೇಳಿದ್ದಾರೆ.
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ತಮಗೆ ಕರೆ ಮಾಡಿ "ಗೌರವಾರ್ಥವಾಗಿ" ಪ್ರಶಸ್ತಿ ಸ್ವೀಕರಿಸಿರುವುದಾಗಿ ಅವರು ಹೇಳಿದರು ಎಂದು ಮಾಹಿತಿ ನೀಡಿದರು.
"ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿ ಇಂದು ನನಗೆ ಕರೆ ಮಾಡಿ, 'ನೀವು ನಿಜವಾಗಿಯೂ ಅದಕ್ಕೆ ಅರ್ಹರು ಎಂಬ ಕಾರಣಕ್ಕೆ ನಾನು ಇದನ್ನು ನಿಮ್ಮ ಗೌರವಾರ್ಥವಾಗಿ ಸ್ವೀಕರಿಸುತ್ತಿದ್ದೇನೆ' ಎಂದು ಹೇಳಿದರು. ಆದರೂ, 'ಇದನ್ನು ನನಗೆ ಕೊಡಿ' ಎಂದು ನಾನು ಹೇಳಲಿಲ್ಲ. ಅವರು ವಿಪತ್ತಿನ ಸಮಯದಲ್ಲಿ ವೆನೆಜುವೆಲಾದಲ್ಲಿ ಅವರಿಗೆ ಸಾಕಷ್ಟು ಸಹಾಯ ಬೇಕಾಗಿತ್ತು. ಲಕ್ಷಾಂತರ ಜೀವಗಳನ್ನು ಉಳಿಸಿದ್ದರಿಂದ ನನಗೆ ಸಂತೋಷವಾಗಿದೆ..." ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಿದ್ದಕ್ಕಾಗಿ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರ ಹೋರಾಟಕ್ಕಾಗಿ ಮಚಾದೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು.
ನೊಬೆಲ್ ಪ್ರಶಸ್ತಿಗೆ ಪಟ್ಟು ಹಿಡಿದಿದ್ದ ಟ್ರಂಪ್
ಈ ಹಿಂದೆ ನೊಬೆಲ್ ಪ್ರಶಸ್ತಿಗೆ ಪಟ್ಟು ಹಿಡಿದಿದ್ದ ಟ್ರಂಪ್, ತಾವು ಏಳು ಯುದ್ದಗಳನ್ನು ಕೊನೆಗೊಳಿಸಿದ್ದಾಗಿ ಹೇಳಿದ್ದರು. ಟ್ರಂಪ್ ಅವರ ಮಾತಿಗೆ ಪಾಕಿಸ್ತಾನ ಅಧ್ಯಕ್ಷ ಶೆಹಬಾಜ್ ಷರೀಫ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ಧನಿಗೂಡಿಸಿದ್ದರು.
7 ಯುದ್ಧಗಳನ್ನು ನಿಲ್ಲಿಸಿದ್ದೇನೆ
"ನಾನು, 'ಸರಿ, ಇತರ ಏಳು ಯುದ್ಧಗಳ ಬಗ್ಗೆ ಏನು? ನನಗೆ ಪ್ರತಿಯೊಂದಕ್ಕೂ ನೊಬೆಲ್ ಪ್ರಶಸ್ತಿ ಸಿಗಬೇಕು' ಎಂದು ಹೇಳಿದೆ. ಆದ್ದರಿಂದ ಅವರು, 'ನೀವು ರಷ್ಯಾ ಮತ್ತು ಉಕ್ರೇನ್ ಅನ್ನು ನಿಲ್ಲಿಸಿದರೆ, ನೀವು ನೊಬೆಲ್ ಪಡೆಯಲು ಸಾಧ್ಯವಾಗುತ್ತದೆ' ಎಂದು ಹೇಳಿದರು. ನಾನು ಏಳು ಯುದ್ಧಗಳನ್ನು ನಿಲ್ಲಿಸಿದೆ ಎಂದು ನಾನು ಹೇಳಿದೆ. ಅದು ಒಂದು ಯುದ್ಧ, ಮತ್ತು ಅದು ದೊಡ್ಡದು," ಎಂದು ತಿಳಿಸಿದರು.
"ಅರ್ಮೇನಿಯಾ, ಅಜೆರ್ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ" ಸೇರಿದಂತೆ ಅವರ ನಾಯಕತ್ವದಲ್ಲಿ ನಿಲ್ಲಿಸಲಾದ ಸಂಘರ್ಷಗಳನ್ನು ಪಟ್ಟಿ ಟ್ರಂಪ್ ಮಾಡಿರುವುದಾಗಿ ಹೇಳಿದರು.
ಗುರುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಹೇಳಿದರು. X ನಲ್ಲಿ ಪೋಸ್ಟ್ ಮಾಡಿದ್ದ ಅವರು, "ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ. ಅವರು ಅದಕ್ಕೆ ಅರ್ಹರು!" ಎಂದು ಬರೆದಿದ್ದಾರೆ.
Advertisement