
ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ಆನ್ಲೈನ್ ಜಿಹಾದಿ ಕೋರ್ಸ್ ಆರಂಭಿಸಿದ್ದು, ಇದಕ್ಕಾಗಿ 500 ಪಾಕಿಸ್ತಾನ ರೂಪಾಯಿ ಶುಲ್ಕ ಕೂಡ ವಿಧಿಸಿದೆ.
ಹೌದು.. ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್, ತನ್ನ ಮಹಿಳಾ ಘಟಕವಾದ 'ಜಮಾತ್ ಉಲ್ ಮುಮಿನತ್'ಗಾಗಿ ಆನ್ಲೈನ್ ನೇಮಕಾತಿ ಕಾರ್ಯ ಆರಂಭಿಸಿದ್ದು, ಆನ್ಲೈನ್ ಜಿಹಾದಿ ಕೋರ್ಸ್ ಆರಂಭಿಸಿದೆ.
ಸಂಘಟನೆಗಾಗಿ ಉಗ್ರರ ನೇಮಕಾತಿ ಮತ್ತು ಹಣ ಸಂಗ್ರಹಿಸಲು 'ತುಫತ್ ಅಲ್ ಮುಮಿನತ್' ಎಂಬ ಆನ್‌ಲೈನ್ ಜಿಹಾದಿ ಕೋರ್ಸ್ ಆರಂಭಿಸಿದೆ. ಇದಕ್ಕೆ 500 ಪಾಕಿಸ್ತಾನ ರೂ (ಭಾರತದ 156 ರೂ.) ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಮಸೂದ್ ಅಜರ್‌ನ ಕುಟುಂಬ ಸದಸ್ಯರ ಮೂಲಕವೇ ತರಬೇತಿ ನೀಡುವ ಮೂಲಕ, ಪಾಕಿಸ್ತಾನದ ಸಾಮಾಜಿಕ ನಿರ್ಬಂಧಗಳನ್ನು ಮೀರಿ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಸಂಚು ರೂಪಿಸಿದೆ.
ಈಗಾಗಲೇ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರಗಾಮಿ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ಮಸೂದ್ ಅಝರ್‌ನ ಜೈಶ್ ಎ ಮೊಹಮ್ಮದ್ (ಜೆಇಎಂ), ಇದೀಗ 'ಜಮಾತ್ ಉಲ್-ಮುಮಿನತ್' ಎಂಬ ಮಹಿಳಾ ಘಟಕವನ್ನು ಬಲಪಡಿಸಲು ಮುಂದಾಗಿದೆ.
ಇದಕ್ಕಾಗಿ 'ತುಫತ್ ಅಲ್ ಮುಮಿನತ್' ಹೆಸರಿನಲ್ಲಿ ಆನ್‌ಲೈನ್ ತರಬೇತಿ ಕೋರ್ಸ್ ಪ್ರಾರಂಭಿಸಿದೆ. ಈ ಕೋರ್ಸ್‌ಗೆ ಸೇರುವ ಪ್ರತಿಯೊಬ್ಬ ಮಹಿಳೆಯಿಂದ 500 ಪಾಕಿಸ್ತಾನಿ ರೂಪಾಯಿ (ಭಾರತದ 156 ರೂ.) ಶುಲ್ಕ ವಸೂಲಿ ಮಾಡಲಾಗುತ್ತಿದೆ.
ಈ ಆನ್‌ಲೈನ್ ನೇಮಕಾತಿ ಅಭಿಯಾನವು ನವೆಂಬರ್ 8 ರಿಂದ ಆರಂಭವಾಗಲಿದ್ದು ಇದರಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಇಬ್ಬರು ಸಹೋದರಿಯರಾದ ಸಾದಿಯಾ ಅಜರ್ ಮತ್ತು ಸಮೈರಾ ಅಜರ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಇವರು ಪ್ರತಿದಿನ 40 ನಿಮಿಷಗಳ ಕಾಲ 'ಉಪನ್ಯಾಸ' ನೀಡಲಿದ್ದು, ಜಿಹಾದ್ ಮತ್ತು ಇಸ್ಲಾಂ ಕುರಿತು ಮಹಿಳೆಯರ 'ಕರ್ತವ್ಯ'ಗಳನ್ನು ಬೋಧಿಸಲಿದ್ದಾರೆ. ಈ ಮೂಲಕ ಮಹಿಳೆಯರನ್ನು 'ಜಮಾತ್ ಉಲ್ ಮುಮಿನತ್' ಸೇರಲು ಪ್ರೇರೇಪಿಸಲಿದ್ದಾರೆ ಎಂದು ಹೇಳಲಾಗಿದೆ.
ಮಸೂದ್ ಅಜರ್ ಸಹೋದರಿಗೆ ಮಹಿಳಾ ಘಟಕದ ನೇತೃತ್ವ
ಅಂದಹಾಗೆ ಈ ಉಗ್ರ ಸಂಘಟನೆಯ ಮಹಿಳಾ ಘಟಕದ ಸಂಪೂರ್ಣ ಜವಾಬ್ದಾರಿಯನ್ನು ಮಸೂದ್ ಅಜರ್‌ನ ಕಿರಿಯ ಸಹೋದರಿ ಸಾದಿಯಾ ಅಜರ್‌ಗೆ ವಹಿಸಲಾಗಿದೆ. ಈಕೆಯ ಪತಿ ಯೂಸುಫ್ ಅಜರ್, ಕಳೆದ ಮೇ ತಿಂಗಳಲ್ಲಿ ಭಾರತೀಯ ವಾಯುಪಡೆಯು ಬಾಲಾಕೋಟ್‌ನ ಜೈಶ್ ಪ್ರಧಾನ ಕಚೇರಿಯ ಮೇಲೆ ನಡೆಸಿದ 'ಆಪರೇಷನ್ ಸಿಂಧೂರ' ವೈಮಾನಿಕ ದಾಳಿಯಲ್ಲಿ ಹತನಾಗಿದ್ದ.
ಈ ದಾಳಿಯನ್ನು ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಲಾಗಿತ್ತು. ಪಹಲ್ಗಾಮ್ ದಾಳಿಕೋರರಲ್ಲಿ ಒಬ್ಬನಾದ ಉಮರ್ ಫಾರೂಕ್‌ನ ಪತ್ನಿ ಅಫ್ರೀರ್ ಫಾರೂಕ್ ಕೂಡ ಈ ತರಬೇತಿ ತಂಡದಲ್ಲಿ ಸೇರಿದ್ದಾಳೆ ಎಂದು ಸೇನಾ ಮೂಲಗಳು ತಿಳಿಸಿವೆ.
Advertisement