
ಒಂದು ದಶಕಕ್ಕೂ ಹೆಚ್ಚು ಕಾಲ ಲಂಡನ್‌ನಲ್ಲಿ ವಾಸಿಸುತ್ತಿದ್ದ ಭಾರತೀಯ ಮಹಿಳೆಯೊಬ್ಬರು ತಾನು ಮತ್ತು ತನ್ನ ಕುಟುಂಬ ಬ್ರಿಟನ್ ತೊರೆಯಲು ನಿರ್ಧರಿಸಿದ್ದು ಈ ಬಗ್ಗೆ ಅವರು ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ನಗರವು 'ಬದುಕುಳಿಯಲು' ಉತ್ತಮವಾಗಿದೆ ಆದರೆ 'ಬೆಳವಣಿಗೆ' ಅಲ್ಲ ಎಂದು ಹೇಳಿದ್ದಾರೆ. ಪಲ್ಲವಿ ಚಿಬ್ಬರ್ ಎಂಬುವರು ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾನು 10 ವರ್ಷಗಳ ಕಾಲ ಇಲ್ಲಿ ವಾಸಿಸುತ್ತಿದ್ದು ಇದೀಗ ಲಂಡನ್ ತೊರೆಯುತ್ತಿರುವುದಾಗಿ ಹೇಳಿದ್ದಾರೆ.
ಪಲ್ಲವಿ ಚಿಬ್ಬರ್ ತಮ್ಮ ನಿರ್ಧಾರಕ್ಕೆ ನಾಲ್ಕು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಮೊದಲನೆಯದಾಗಿ, ಲಂಡನ್ ಅಭಿವೃದ್ಧಿ ಹೊಂದುವ ಬದಲು ಜನರು ಬದುಕಲಷ್ಟೇ ಯೋಗ್ಯವಾಗಿದೆ. ಎರಡನೆಯದಾಗಿ, ಜೀವನ ವೆಚ್ಚ ತುಂಬಾ ಹೆಚ್ಚಾಗಿದೆ. ಕಳೆದ ದಿನ ನಾವು ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದೇವು. ನಾವು ಆಲೂ ಚಾಟ್, ಹುರಿದ ಭಿಂಡಿ, ಹಲಸಿನ ಹಣ್ಣು, ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದೇವು. ಬಿಲ್ 80 ಪೌಂಡ್ (ಸುಮಾರು ರೂ. 9,525) ಆಗಿತ್ತು ಎಂದು ಚಿಬ್ಬರ್ ಹೇಳಿದರು.
ಮೂರನೇ ಕಾರಣವೆಂದರೆ ತೆರಿಗೆ. ನಾವು ಸುಮಾರು ಶೇಕಡಾ 42ರಷ್ಟು ನೇರ ತೆರಿಗೆಯನ್ನು ಪಾವತಿಸುತ್ತೇವೆ. ಹಾಗೂ ಪರೋಕ್ಷ ತೆರಿಗೆಗಳೊಂದಿಗೆ ಅದು ಶೇಕಡಾ 50ಕ್ಕೆ ಏರುತ್ತದೆ. ಆದ್ದರಿಂದ ನಮ್ಮ ಅರ್ಧದಷ್ಟು ಸಂಬಳ ಸರ್ಕಾರಕ್ಕೆ ಹೋಗುತ್ತದೆ ಎಂದರು. ಅಂತಿಮವಾಗಿ, ಚಿಬ್ಬರ್ ಯುಕೆಯಲ್ಲಿ ತಮ್ಮ ಮಕ್ಕಳಿಗೆ ಬಹಳ ಕಡಿಮೆ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದರು. ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಇದು ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಅವರು ವಾದಿಸಿದರು.
ಮುಂದೆ ನಮ್ಮ ಭವಿಷ್ಯ ಹೇಗಿರುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ ಬದಲಾವಣೆಯ ಸಮಯ ಬಂದಿದೆ ಎಂದು ನಮಗೆ ಖಂಡಿತವಾಗಿಯೂ ಅನಿಸಿತ್ತು ಎಂದು ಅವರು ಹೇಳಿದರು. ನನಗೆ ಲಂಡನ್ ತುಂಬಾ ಇಷ್ಟ. ನಿಜಕ್ಕೂ ಈ ನಗರದಂತ ಸ್ಥಳ ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲ. ನಾನು ಕಟ್ಟಾ ಲಂಡನ್ ನಿವಾಸಿ, ಮತ್ತು ನನ್ನ ಹೃದಯದ ಒಂದು ಭಾಗ ಯಾವಾಗಲೂ ಇಲ್ಲೇ ಇರುತ್ತದೆ. ಆದರೆ ಅದೇ ಸಮಯದಲ್ಲಿ, ಜೀವನ ವೆಚ್ಚದ ಬಿಕ್ಕಟ್ಟು, ಜೀವನ ಸಮಸ್ಯೆಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳು ಎಂಬ ವಾಸ್ತವವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಈ ಕಠಿನ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಮಹಿಳೆಯ ವಿಡಿಯೋಗೋ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಸಾಕಷ್ಟು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಲಂಡನ್‌ನಲ್ಲಿ 10 ವರ್ಷಗಳನ್ನು ಕಳೆದ ನಂತರ ನಾನು ಕೂಡ ಅದೇ ಕಾರಣಗಳಿಗಾಗಿ ಭಾರತಕ್ಕೆ ಸ್ಥಳಾಂತರಗೊಂಡಿದ್ದೇನೆ. ನಾನು ಎರಡು ವರ್ಷಗಳಿಂದ ಮುಂಬೈನಲ್ಲಿದ್ದೇನೆ. ಇದುವರೆಗಿನ ಅತ್ಯುತ್ತಮ ನಿರ್ಧಾರ. ಮುಂಬೈ ಅಷ್ಟೇ ದುಬಾರಿಯಾಗಿದ್ದರೂ, ನೀವು ಇಲ್ಲಿ ಅಭಿವೃದ್ಧಿ ಹೊಂದುತ್ತೀರಿ, ಎಲ್ಲೆಡೆ ಸಮುದಾಯದ ಪ್ರಜ್ಞೆ ಮತ್ತು ಅವಕಾಶಗಳಿವೆ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ನಿಜವಾಗಿಯೂ! ನಿಮಗೆ ಶುಭವಾಗಲಿ ಎಂದು ಬರೆದಿದ್ದಾರೆ.
Advertisement