
ನ್ಯೂಯಾರ್ಕ್/ವಾಷಿಂಗ್ಟನ್: ರಷ್ಯಾ ವಿರುದ್ಧ ಎರಡನೇ ಹಂತದ ನಿರ್ಬಂಧಗಳನ್ನು ವಿಧಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ಶ್ವೇತಭವನದ ಹೊರಗೆ ರಷ್ಯಾದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು, ನಾನೇ" ಎಂದು ಟ್ರಂಪ್ ಹೇಳಿದರು.
ಮಾಸ್ಕೋದಿಂದ ಕಚ್ಚಾ ತೈಲವನ್ನು ಖರೀದಿಸುವ ದೇಶಗಳ ಮೇಲೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ಹೆಚ್ಚಿನ ದ್ವಿತೀಯ ನಿರ್ಬಂಧಗಳನ್ನು ವಿಧಿಸಿದರೆ ರಷ್ಯಾದ ಆರ್ಥಿಕತೆಯು ಕುಸಿಯುತ್ತದೆ" ಎಂದು ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ ಬೆನ್ನಲ್ಲೇ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್, ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಅಧ್ಯಕ್ಷ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರು ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ್ದು, ಫಲಪ್ರದ ಮಾತುಕತೆಯಾಗಿದೆ. ರಷ್ಯಾದ ಮೇಲೆ ಹೆಚ್ಚಿನ ಒತ್ತಡ ಹೇರಲು ಯುಎಸ್ ಮತ್ತು ಯುರೋಪಿಯನ್ ಒಕ್ಕೂಟ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಿರುವುದಾಗಿ ತಿಳಿಸಿದರು.
ಟ್ರಂಪ್ ಆಡಳಿತವು ಭಾರತದ ಮೇಲೆ ಈ ಹಿಂದೆ ಘೋಷಿಸಿದ ಶೇಕಡಾ 25 ರಷ್ಟು ಹೆಚ್ಚುವರಿ ಸುಂಕಗಳ ಜೊತೆಗೆ ರಷ್ಯಾದ ತೈಲವನ್ನು ಖರೀದಿಸಲು ಭಾರತದ ಮೇಲೆ ಹೆಚ್ಚುವರಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದೆ. ಇದು ಆಗಸ್ಟ್ 27 ರಿಂದ ಜಾರಿಗೆ ಬಂದಿದ್ದು, ಭಾರತ ಒಟ್ಟಾರೇ ಶೇ. 50 ರಷ್ಟು ಸುಂಕವನ್ನು ಭರಿಸುತ್ತಿದೆ.
ರಷ್ಯಾದ ತೈಲವನ್ನು ಖರೀದಿಸುವ ಭಾರತದ ಮೇಲೆ ಕಳೆದ ತಿಂಗಳು ಟ್ರಂಪ್ ದ್ವಿತೀಯ ನಿರ್ಬಂಧಗಳನ್ನು ಹಾಕಿದರು. ರಷ್ಯಾದ ಅತಿದೊಡ್ಡ ಖರೀದಿದಾರ ಚೀನಾದ ಇಂತಹ ನಿರ್ಬಂಧವನ್ನು ಟ್ರಂಪ್ ಹಾಕಿಲ್ಲ. ಭಾರತ ರಷ್ಯಾದಿಂದ ತೈಲ ಖರೀದಿಸಿ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಪ್ರಯತ್ನಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಬೆಸೆಂಟ್ ಮತ್ತು ವ್ಯಾಪಾರ ಸಲಹೆಗಾರ ಪೀಟರ್ ನವರೊ ಸೇರಿದಂತೆ ಹಲವರು ಟ್ರಂಪ್ ಸಹಚರರು ಹೇಳುತ್ತಿದ್ದಾರೆ.
ಅಮೆರಿಕ ವಿಧಿಸಿರುವ ಸುಂಕಗಳನ್ನು "ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸವಾಗಿದೆ ಎಂದು ಭಾರತ ಕರೆದಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಾರುಕಟ್ಟೆ ಪೈಪೋಟಿಯಿಂದ ರಷ್ಯಾದಿಂದ ತೈಲ ಖರೀದಿಸುತ್ತಿರುವುದಾಗಿ ಭಾರತ ಸಮರ್ಥಿಸಿಕೊಂಡಿದೆ.
Advertisement