
ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಜೆನ್ Z ಪ್ರತಿಭಟನೆ ತಾರಕಕ್ಕೇರಿರುವಂತೆಯೇ ಇತ್ತ ಪ್ರತಿಭಟನಾಕಾರರು ನೇಪಾಳದ ಮಂತ್ರಿಯನ್ನೇ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರುವ ಭೀಕರ ವಿಡಿಯೊವೊಂದು ವೈರಲ್ ಆಗುತ್ತಿದೆ.
ಹೌದು.. ನೇಪಾಳದ ಪ್ರಧಾನಿ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರದ ವಿತ್ತ ಸಚಿವ ಬಿಷ್ಣು ಪೌಡೆಲ್ ರನ್ನು ಪ್ರತಿಭಟನಾಕಾರರು ಬೀದಿ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಈ ಕುರಿತ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಸಚಿವ ಬಿಷ್ಣು ಪೌಡೆಲ್ ರನ್ನು ಸುಮಾರು 25ಕ್ಕೂ ಅಧಿಕ ಮಂದಿ ಅಟ್ಟಾಡಿಸಿ ಹೊಡೆದಿದ್ದಾರೆ. ಅತ್ತ ಪೌಡೆಲ್ ಜೀವ ಉಳಿಸಿಕೊಳ್ಳಲು ಓಡುತ್ತಿದ್ದು, ಈ ವೇಳೆ ಎರಡು ಡಜನ್‌ಗೂ ಹೆಚ್ಚು ಜನರು ಅವರಪ ಬೆನ್ನಟ್ಟುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಒಬ್ಬ ವ್ಯಕ್ತಿ ಅವನನ್ನು ಒದೆಯುತ್ತಿರುವುದು ಮತ್ತು ಇತರರು ಹೊಡೆಯುತ್ತಿರುವುದು ಕಂಡುಬಂದಿದೆ.
ಪ್ರಧಾನಿ ಮನೆ, ನೇಪಾಳ ಸಂಸತ್ ಗೆ ಬೆಂಕಿ
ಇನ್ನು ಪ್ರತಿಭಟನಾಕಾರರು ಇಂದು ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರ ಕಚೇರಿ ಮತ್ತು ಬಾಲ್ಕೋಟ್ ನಲ್ಲಿರುವ ಖಾಸಗಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಬೆಂಕಿ ಹಾಕಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ.
ಮಾತ್ರವಲ್ಲದೇ ಅತ್ತ ನೇಪಾಳ ಸಂಸತ್ ಭವನದ ಮೇಲೂ ಪ್ರತಿಭಟನಾಕಾರರು ದಾಳಿ ಮಾಡಿದ್ದು, ಸಂಸತ್ ಭವನಕ್ಕೆ ಬೆಂಕಿ ಹಾಕಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ಓಲಿ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
'ಸಮಸ್ಯೆಗಳ ರಾಜಕೀಯ ಪರಿಹಾರ ಮತ್ತು ಪರಿಹಾರದತ್ತ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಇಂದಿನಿಂದಲೇ ಜಾರಿಗೆ ಬರುವಂತೆ ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ" ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿಕೆ ಹೊರಡಿಸಿದ್ದಾರೆ. ಓಲಿ ಜೊತೆಗೆ, ಅವರ ಸರ್ಕಾರದ ಕನಿಷ್ಠ 4 ಮಂತ್ರಿಗಳು ಸಹ ರಾಜೀನಾಮೆ ನೀಡಿದ್ದಾರೆ.
ಏನಿದು ವಿವಾದ?
ಹಿಂದೆ ಮುಂದೆ ನೋಡದೆ ನೇಪಾಳ ಸರ್ಕಾರವು ತೆಗೆದುಕೊಂಡು ಆ ಒಂದು ನಿರ್ಧಾರ ನೇಪಾಳದಲ್ಲಿ ಭಾರೀ ಅಲ್ಲೋಲ - ಕಲ್ಲೋಲ ಸೃಷ್ಟಿ ಮಾಡಿದೆ.
ನೇಪಾಳದಲ್ಲಿ ಅಲ್ಲಿನ ಸರ್ಕಾರವು ಸೋಷಿಯಲ್ ಮೀಡಿಯಾ ಖಾತೆಗಳಾದ ಯೂಟ್ಯೂಬ್, ಎಕ್ಸ್, ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧ ಮಾಡಿ, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ಸರ್ಕಾರದ ಆದೇಶ ಮಾಡಿತ್ತು.
ಈ ಏಕಾಏಕಿ ನಿರ್ಧಾರ ಅಲ್ಲಿನ ಯುವ ಜನರನ್ನು ಕೆರಳಿಸಿದೆ. ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
Advertisement