
ಬ್ಯಾಂಕಾಕ್: ಥಾಯ್ಲೆಂಡ್ ನ ಮೃಗಾಲಯದಲ್ಲಿ (Safari World zoo) ಭಯಾನಕ ಘಟನೆಯೊಂದು ನಡೆದಿದ್ದು, ಸಫಾರಿ ಜೀಪ್ ನಿಂದ ಇಳಿದ ಸಿಬ್ಬಂದಿಯನ್ನೇ ಸಿಂಹಗಳ ಗುಂಪು ಎಳೆದೊಯ್ದು ಕೊಂದು ತಿಂದು ಹಾಕಿವೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್ (Safari World zoo) ಮೃಗಾಲಯದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಎದುರೇ ಸಿಂಹಗಳ ಗುಂಪೊಂದು ಮೃಗಾಲಯದ ಪಾಲಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿವೆ.
ಸಫಾರಿ ವರ್ಲ್ಡ್‌ನಲ್ಲಿ ಮೃಗಾಲಯದ ಪಾಲಕನಾಗಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಎಂಬಾತನ ಮೇಲೆ ಸಿಂಹಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಈ ಭೀಕರ ಘಟನೆಗೆ ನೂರಾರು ಪ್ರವಾಸಿಗರು ಸಾಕ್ಷಿಯಾಗಿದ್ದರು. ಅಲ್ಲದೆ ಕೆಲವರು ತಮ್ಮ ಮೊಬೈಲ್ ನಲ್ಲಿ ಈ ಭೀಕರ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಕುರಿತು ಆಘಾತ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್ ಆಡಳಿತ ಮಂಡಳಿ ಮೃತ ಸಿಬ್ಬಂದಿಯ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಅಲ್ಲದೆ ಮೃಗಾಲಯದಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ.
ಕಳೆದ 40 ವರ್ಷಗಳಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಕಂಪನಿಯು ಎಲ್ಲ ಪ್ರವಾಸಿಗರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ವಿಶೇಷವಾಗಿ ಕಾಡು ಪ್ರಾಣಿ ವಲಯದಲ್ಲಿ ತೆರೆದ ಮೃಗಾಲಯಕ್ಕೆ ಭೇಟಿ ನೀಡುವಾಗ ವಾಹನಗಳಿಂದ ಇಳಿಯದಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಇಂತಹ ಘಟನೆ ಮರುಕಳಿಸದಂತೆ ತನಿಖೆ ನಡೆಸಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸುವುದಾಗಿ ತಿಳಿಸಿದೆ.
ಶಿಷ್ಟಾಚಾರ ಉಲ್ಲಂಘನೆ
ಇದೇ ವೇಳೆ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸಿಂಹದ ಆವರಣದೊಳಗೆ ಕಾಲಿಟ್ಟ ಕೂಡಲೇ ಸಿಂಹಗಳು ಅವರ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ
'ಮೃಗಾಲಯ ಮತ್ತು ಪ್ರವಾಸಿಗರ ಆಕರ್ಷಣೆಯಾಗಿದ್ದ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ರಂಗ್ಖರಸಾಮೀ ಮೇಲೆ ಸಿಂಹಗಳ ಹಿಂಡೊಂದು ಸುಮಾರು 15 ನಿಮಿಷಗಳ ಕಾಲ ದಾಳಿ ನಡೆಸಿದೆ. ಬಳಿಕ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಅವರು ಅಲ್ಲಿ ಸಾವನ್ನಪ್ಪಿದರು' ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಆಗಿದ್ದೇನು?
ನೂರಾರು ಪ್ರವಾಸಿಗರನ್ನು ಹೊತಿದ್ದ ಹತ್ತಾರು ಸಫಾರಿ ವಾಹನಗಳು ಸಿಂಹಗಳಿದ್ದ ಜಾಗದಲ್ಲಿ ಬಂದು ನಿಂತವು. ಈ ವೇಳೆ ಸಿಂಹಗಳ ಗುಂಪು ಅಲ್ಲಿತ್ತು. ಇದೇ ಸಂದರ್ಭದಲ್ಲಿ ಸಿಬ್ಬಂದಿ ಜಿಯಾನ್ ರಂಗ್ಖರಸಾಮೀ ಜೀಪ್ ನಿಂದ ಕೆಳಗೆ ಇಳಿದಿದ್ದಾರೆ. ಇದೇ ಹೊತ್ತಿನಲ್ಲಿ ಸಿಂಹಗಳ ಗುಂಪು ಏಕಾಏಕಿ ಆತನ ಮೇಲೆರಗಿ ಆತನನ್ನು ಹೊತ್ತೊಯ್ದು ದಾಳಿ ಮಾಡಿವೆ.
ಈ ವೇಳೆ ಇತರೆ ವಾಹನಗಳಲ್ಲಿದ್ದ ಪ್ರವಾಸಿಗರು ಕಿರುಚಾಡುತ್ತ ಕೈಗೆ ಸಿಕ್ಕ ವಸ್ತುಗಳನ್ನು ಅವುಗಳತ್ತ ಎಸೆಯುತ್ತ ಕಾರಿನ ಹಾರ್ನ್ ಮಾಡಿ ಸಿಂಹಳನ್ನು ಓಡಿಸುವ ಯತ್ನ ಮಾಡಿದರು. ಸಿಂಹಗಳು ಚದುರುತ್ತಲೇ ಗಾಯಾಳು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಅಷ್ಟು ಹೊತ್ತಿಗಾಗಲೇ ಸಾವನ್ನಪ್ಪಿದ್ದ ಎಂದು ಹೇಳಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವನ್ಯಜೀವಿ ಇಲಾಖೆಯ ಮಹಾನಿರ್ದೇಶಕ ಅಟ್ಟಪೋಲ್ ಚರೋಯೆಂಚನ್ಸಾ, ಸಿಂಹಗಳಿಗೆ ಆಹಾರ ನೀಡುತ್ತಿರುವಾಗ ರಂಗ್ಖರಸಾಮೀ ಮೇಲೆ ದಾಳಿ ನಡೆದಿದೆ. ಅವುಗಳಲ್ಲಿ ಒಂದರ ಆರೋಗ್ಯ ಕೆಟ್ಟಿದ್ದು ದಾಳಿ ನಡೆಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ. ಅಂತೆಯೇ ಪ್ರಕರಣದ ಕುರಿತು ಮಧ್ಯಪ್ರವೇಶ ಮಾಡಿರುವ ಪ್ರಾಣಿ ಹಕ್ಕುಗಳ ಗುಂಪಾದ ಪೆಟಾ, ಕಾಡು ಪ್ರಾಣಿಗಳನ್ನು ನಿರ್ವಹಿಸುವುದು ಅಪಾಯಕಾರಿಯಾಗಿರುವುದರಿಂದ ಸಿಂಹಗಳನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಒತ್ತಾಯಿಸಿದೆ.
Advertisement