

ಗಾಜಾ ಪಟ್ಟಿಯಲ್ಲಿರುವ ಒತ್ತೆಯಾಳುಗಳ ಬಗ್ಗೆ ಚಿಂತಿಸುವ ಬದಲು, ಇಸ್ರೇಲ್ ಗಾಜಾ ಇನ್ನು ವಾಸಯೋಗ್ಯ ಸ್ಥಳವಾಗದಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಕತಾರೆ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕತಾರ್‌ನ ಆಡಳಿತಾರೂಢ ದೊರೆ ಇಸ್ರೇಲ್ ವಿರುದ್ಧ ಈ ಆರೋಪ ಮಾಡಿದ್ದಾರೆ. ಕಳೆದ ವಾರ ದೋಹಾದಲ್ಲಿ ಹಮಾಸ್ ಮುಖಂಡರನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಅರಬ್ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಒಗ್ಗಟ್ಟು ಪ‍್ರದರ್ಶಿಸುವ ನಿಟ್ಟಿನಲ್ಲಿ ಕತಾರ್ ಇಂದು ಶೃಂಗಸಭೆ ಆಯೋಜಿಸಿದ್ದು, ಈ ವೇಳೆ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಈ ಹೇಳಿಕೆ ನೀಡಿದ್ದಾರೆ.
ಇಸ್ರೇಲ್ ಹಮಾಸ್‌ನ ಎಲ್ಲ ನಾಯಕರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರೆ, ಮಾತುಕತೆಗೆ ಏಕೆ ಮುಂದಾಯಿತು? ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಬಯಸಿದ್ದರೆ, ಎಲ್ಲಾ ಸಂಧಾನಕಾರರನ್ನು ಹತ್ಯೆ ಮಾಡಿದ್ದು ಏಕೆ? ಎಂದು ಶೇಖ್ ತಮೀಮ್ ಭಾಷಣದಲ್ಲಿ ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಸಮಾಧಾನದಿಂದ ಭಾಷಣ ಮಾಡುವ ದೊರೆ ಶೇಖ್ ತಮೀಮ್ ಅವರು ಇದೇ ಮೊದಲ ಬಾರಿಗೆ ಶೃಂಗಸಭೆಯಲ್ಲಿ 45 ನಿಮಿಷಗಳ ಕಾಲ ಉಗ್ರ ಭಾಷಣ ಮಾಡಿದ್ದಾರೆ. ಇಸ್ರೇಲ್– ಪ್ಯಾಲೆಸ್ಟೀನ್ ಸಂಘರ್ಷ ಕೊನೆಗೊಳಿಸಿ, ಕದನ ವಿರಾಮ ಜಾರಿಗೆ ತರುವ ನಿಟ್ಟಿನಲ್ಲಿ ಶೇಕ್ ಅವರು ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕತಾರ್ ರಾಜಧಾನಿ ದೋಹಾದಲ್ಲಿ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ನಮ್ಮ ನಾಯಕ ಬದುಕುಳಿದಿದ್ದಾರೆ. ಆದರೆ ಹಮಾಸ್ ನಾಯಕ ಪುತ್ರ ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಬಂಡುಕೋರರ ಗುಂಪು ಅಧಿಕೃತ ಹೇಳಿಕೆ ನೀಡಿದೆ. ಈ ದಾಳಿಯಲ್ಲಿ ಹಮಾಸ್ ನಾಯಕ ಖಲೀಲ್ ಅಲ್-ಹಯ್ಯನ ಪುತ್ರ, ಓರ್ವ ಸಹಾಯಕ ಸಿಬ್ಬಂದಿ, ಓರ್ವ ಭದ್ರತಾ ಅಧಿಕಾರಿ ಸೇರಿದಂತೆ ಕನಿಷ್ಠ 6 ಜನ ಸಾವನ್ನಪ್ಪಿದ್ದಾರೆ ಎಂದು ಗುಂಪು ದೃಢಪಡಿಸಿದೆ.
Advertisement