
ವಾಷಿಂಗ್ಟನ್: ಅಮೆರಿಕದಲ್ಲಿನ ಯೂನಿಯನ್ ಪ್ರತಿಮೆ ( 'Statue of Union) ಎಂದೇ ಹೆಸರಾದ 90 ಅಡಿ ಹನುಮಂತನ ಪ್ರತಿಮೆ ಬಗ್ಗೆ ಟೆಕ್ಸಾಸ್ ರಿಪಬ್ಲಿಕನ್ ಪಕ್ಷದ ನಾಯಕರೊಬ್ಬರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅಮೆರಿಕವನ್ನು ಕ್ರಿಶ್ಚಿಯನ್ ರಾಷ್ಟ್ರ ಎಂದು ಕರೆದಿರುವ ಟೆಕ್ಸಾಸ್ ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ಹನುಮಂತನ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಟೆಕ್ಸಾಸ್‌ನ ಶುಗರ್ ಲ್ಯಾಂಡ್ ಪಟ್ಟಣದಲ್ಲಿರುವ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿರುವ ಹನುಮಂತನ ಪ್ರತಿಮೆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಡಂಕನ್, ನಾವು ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಪ್ರತಿಮೆ ನಿರ್ಮಾಣಕ್ಕೆ ಏಕೆ ಅನುಮತಿಸುತ್ತಿದ್ದೇವೆ? ನಮ್ಮದು ಕ್ರಿಶ್ಚಿಯನ್ ರಾಷ್ಟ್ರ ಎಂದು ಡಂಕನ್ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಬೈಬಲ್ ಅನ್ನು ಉಲ್ಲೇಖಿಸಿ, "ನನ್ನನ್ನು ಹೊರತುಪಡಿಸಿ ನಿಮಗೆ ಬೇರೆ ದೇವರು ಇರಬಾರದು. ಆಕಾಶ, ಭೂಮಿ ಮೇಲೆ ಅಥವಾ ಸಮುದ್ರದಲ್ಲಿರುವ ಯಾವುದರ ಪ್ರತಿಮೆ ಅಥವಾ ಚಿತ್ರಣವನ್ನು ನೀವೇ ಮಾಡಿಕೊಳ್ಳಬಾರದು ಎಂದಿದ್ದಾರೆ.
ಅಲೆಕ್ಸಾಂಡರ್ ಡಂಕನ್ ವಿರುದ್ಧ ತೀವ್ರ ಟೀಕಾ ಪ್ರಹಾರ:
ಅಲೆಕ್ಸಾಂಡರ್ ಡಂಕನ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ಹಿಂದೂ ವಿರೋಧಿ ಮತ್ತು ಪ್ರಚೋದನಾಕಾರಿ ಹೇಳಿಕೆಯಾಗಿದೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ಹೇಳಿದ್ದು, ಟೆಕ್ಸಾಸ್ ನ ರಿಪಬ್ಲಿಕ್ ಪಕ್ಷಕ್ಕೆ ವರದಿ ಮಾಡಿದ್ದು, ಇದನ್ನು ಬಗೆಹರಿಸುವಂತೆ ಒತ್ತಾಯಿಸಿದೆ.
ಅಮೆರಿಕದ ಸಂವಿಧಾನ ಯಾವುದೇ ಧರ್ಮದ ಆಚರಣೆಯ ಸ್ವಾತಂತ್ರ ನೀಡಿದೆ ಎಂಬುದನ್ನು ರಿಪಬ್ಲಿಕ್ ನಾಯಕ ನೆನಪು ಮಾಡಿಕೊಳ್ಳಬೇಕು ಎಂದು ಅನೇಕ ನೆಟ್ಟಿಗರು ಆಗ್ರಹಿಸಿದ್ದಾರೆ.
2024ರಲ್ಲಿ ಲೋಕಾರ್ಪಣೆಗೊಂಡ ಯೂನಿಯನ್ ಪ್ರತಿಮೆ ಅಮೆರಿಕದಲ್ಲಿನ ಅತ್ಯಂತ ದೊಡ್ಡದಾದ ಹಿಂದೂ ಪ್ರತಿಮೆಗಳಲ್ಲಿ ಒಂದಾಗಿದೆ. ಇದು ಚಿನ್ನಜೀಯರ್ ಸ್ವಾಮೀಜಿವರ ಕಲ್ಪನೆಯಲ್ಲಿ ಕೆತ್ತಲ್ಪಟ್ಟ ಈ ಪ್ರತಿಮೆ ಅಮೆರಿಕದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ.
Advertisement